ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು : ಕುಟ್ಟ ಮಂಚಳ್ಳಿ ಗ್ರಾಮದಲ್ಲಿ ಘಟನೆ

November 20, 2020

ಮಡಿಕೇರಿ ನ.20 : ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವಿಗೀಡಾಗಿರುವ ಘಟನೆ ಕುಟ್ಟ ಗ್ರಾ.ಪಂ ವ್ಯಾಪ್ತಿಯ ಮಂಚಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬೆಳೆಗಾರ ಮಲ್ಲಂಗಡ ಬೆಳ್ಯಪ್ಪ ಅವರ ತೋಟದಲ್ಲಿ 11 ಕೆವಿ ವಿದ್ಯುತ್ ಮಾರ್ಗ ಹಾದು ಹೋಗಿದ್ದು, ದಿಬ್ಬ ಹತ್ತುವ ಸಂದರ್ಭ ವಿದ್ಯುತ್ ತಂತಿ ಕಾಡಾನೆಗೆ ತಗುಲಿ ಸ್ಥಳದಲ್ಲಿಯೇ ಸಾವಿಗೀಡಾಗಿದೆ.
ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಶುಕ್ರವಾರ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಕಾಡಾನೆ ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ. ಸುಮಾರು 20 ವರ್ಷದ ಹೆಣ್ಣಾನೆ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ತಿತಿಮತಿ ವನ್ಯಜೀವಿ ವಿಭಾಗದ ಎಸಿಎಫ್ ಉತ್ತಪ್ಪ, ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ರಾಜಪ್ಪ, ಶ್ರೀಮಂಗಲ ವನ್ಯ ಜೀವಿ ವಲಯ ಅರಣ್ಯಾಧಿಕಾರಿ ವಿರೇಂದ್ರ ಮರಿಬಸಣ್ಣವರ್ ಅವರು ಸ್ಥಳ ಮಹಜರು ನಡೆಸಿದರು. ಶ್ರೀಮಂಗಲ ಪಶುವೈದ್ಯಾಧಿಕಾರಿ ಡಾ.ಬಿ.ಜಿ.ಗಿರೀಶ್ ಮರಣೋತ್ತರ ಪರೀಕ್ಷೆ ನಡೆಸಿದರು.