ಭೋಜಪುರಿ ಭಾಷೆಯ ಸಿನಿಮಾದಲ್ಲಿ ಹರ್ಷಿಕಾ ಪೂಣಚ್ಚ ನಟನೆ

20/11/2020

ಮಡಿಕೇರಿ ನ.20 : ಕನ್ನಡ, ತಮಿಳು, ತೆಲುಗು, ಕೊಡವ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ಕೊಡಗಿನ ಹರ್ಷಿಕಾ ಪೂಣಚ್ಚ ಇದೀಗ ಭೋಜಪುರಿ ಭಾಷೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈ ಕುರಿತು ಹರ್ಷಿಕಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.
::: ನನ್ನ ಪ್ರೀತಿಯ ಕನ್ನಡಿಗರಿಗೆ ನನ್ನ ನಮಸ್ಕಾರ :::
ನೀವು ಸದಾ ನನ್ನನ್ನು ಬೆಳಿಸಿದ್ದೀರಿ, ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತಿದ್ದೀರಿ. ಕಳೆದ 2 ವರ್ಷಗಳು ನನ್ನ ಜೀವನದ ಅತೀ ಕಷ್ಟದ ಹಾಗು ನೋವಿನ ಸಮಯ, ತಂದೆಯನ್ನು ಕಳೆಕೊಂಡು ನನ್ನ ಹಾಗು ಅಮ್ಮನ ಜೀವನ ದಿಕ್ಕು ತೋಚದಂತೆ ಆಗಿ ಹೋಗಿತ್ತು. ಈಗಲೂ ಅವರ ನೆನಪು ಸದಾ ಕಾಡುತ್ತೆ.
ಸರಿಯಾಗಿ ಒಂದೂವರೆ ವರ್ಷದ ನಂತರ ನಾನು ನನ್ನ ಸಿನಿಮಾ ಕೆಲಸವನ್ನು ಮತ್ತೆ ಶುರುಮಾಡಿದ್ದೇನೆ, ಒಂದು ಭೋಜಪುರಿ ಸಿನೆಮಾ ಶೂಟಿಂಗಾಗಿ ಲಂಡನ್‍ಗೆ ಬಂದಿದ್ದೇನೆ. ಈ ಹೊಸ ಸಿನೆಮಾಗೆ ನಿಮ್ಮೆಲರ ಆಶೀರ್ವಾದ ನನಗೆ ಅತ್ಯಗತ್ಯ ಎಂದಿಗೂ ನೆನಪಿಡಿ, ಬೇರೆ ಯಾವ ಭಾಷೆಯಲ್ಲಿಯು ನಾನು ಕೆಲಸ ಮಾಡಿದರು, ನಾನು ಇಂದಿಗೂ ಎಂದಿಗೂ ಕರ್ನಾಟಕದ ಕನ್ನಡದ ಮನೆ ಮಗಳು ಎಂದು ಬರೆದುಕೊಂಡಿದ್ದಾರೆ.
ಭೋಜ್‍ಪುರಿ ಚಿತ್ರರಂಗದ ಸೂಪರ್ ಸ್ಟಾರ್ ನಟ ಪವನ್ ಸಿಂಗ್ ಸಿನಿಮಾದ ನಾಯಕರಾಗಿದ್ದು, ಈ ಸಿನಿಮಾ ಭೋಜ್‍ಪುರಿ ಜೊತೆಗೆ ಹಿಂದಿ ಭಾಷೆಯಲ್ಲಿ ಸಹ ಬಿಡುಗಡೆಯಾಗಲಿದೆ.