ಡಿ.5ಕ್ಕೆ ಕರ್ನಾಟಕ ಬಂದ್ ಖಚಿತ

November 21, 2020

ಬೆಂಗಳೂರು ನ.21 : ಸಿಎಂ ಬಿಎಸ್ ಯಡಿಯೂರಪ್ಪ ಬೇಕಾದರೆ ನಮ್ಮನ್ನ ಜೈಲಿಗೆ ಹಾಕಲಿ ಆದರೆ ನಾವು ಡಿ.5ಕ್ಕೆ ಕರ್ನಾಟಕ ಬಂದ್ ಮಾಡಿಯೇ ಮಾಡುತ್ತೇವೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಕರ್ನಾಟಕ ಬಂದ್ ಸಂಬಂಧ ಇಂದು ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ “ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಖಚಿತ. ಬಂದ್ ಯಶಸ್ವಿಯಾಗಲೇಬೇಕು ಇದಕ್ಕೆ ಎಲ್ಲರೂ ಸಹಕರಿಸಿ” ಎಂದು ಹೇಳಿದ್ದಾರೆ.
ಕನ್ನಡ ಪರ ಸಂಘಟನೆಗಳು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಸಭೆ ನಡೆಸಿದ್ದು ರಾಜ್ಯ ಸರ್ಕಾರದ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರ ವಿರೋಧಿಸಿ ಕರ್ನಾಟಕ ಬಂದ್ ನಡೆಸಲು ಒಕ್ಕೊರಲ ತೀರ್ಮಾನಕ್ಕೆ ಬಂದಿವೆ.
ಡಿಸೆಂಬರ್ 5ರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಇರಲಿದೆ. ಎಂದ ವಾಟಾಳ್ ನಾಗರಾಜ್ “ಈ ನಿರ್ಧಾರದಲ್ಲಿ ಯಾವ ಬದಲಾವಣೆ ಇಲ್ಲ. ಬಂದ್ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಹೇಳಬಾರದು, ಬಂದ್ ದಿನ ಯಾವ ವಾಹನ ಸಂಚಾರವಿರುವುದಿಲ್ಲ. ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ಇರಲಿದೆ.
“ಅಂದು ಬೆಳಿಗ್ಗೆ 10.30ಕ್ಕೆ ರ್ಯಾಲಿ ಮಾಡಲಿದ್ದೇವೆ. ಹೋಟೆಲ್ ಮಾಲಿಕರ ಸಂಘ, ಉಬರ್, ಓಲಾ ಕ್ಯಾಬ್ ಚಾಲಕರು ಬಂದ್ ಗೆ ಬೆಂಬಲಿಸಿದ್ದಾರೆ” ಎಂದರು.