ಕಾವೇರಿ ನದಿಯಿಂದ ರೂಪಗೊಳ್ಳುವ ಸುಂದರ ಜಲಪಾತ ಮೈಸೂರಿನ ಚುಂಚನಕಟ್ಟೆ ಜಲಪಾತ

21/11/2020

ಚುಂಚನಕಟ್ಟೆ ಜಲಪಾತ ಅಥವಾ ಫಾಲ್ಸ್, ಕಾವೇರಿ ನದಿಯಿಂದ ರೂಪಗೊಳ್ಳುವ ಒಂದು ಸುಂದರ ಜಲಪಾತವಾಗಿದ್ದು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಹ ಯೋಗ್ಯವಾದ ತಾಣವಾಗಿದೆ. ಅಲ್ಲದೆ ಸಾಕಷ್ಟು ಕನ್ನಡ ಚಿತ್ರಗಳು ಇಲ್ಲಿ ಚಿತ್ರೀಕರಣ ಸಹ ಗೊಂಡಿವೆ. ಅಷ್ಟೊಂದು ಹೆಸರುವಾಸಿಯಾಗಿಲ್ಲದಿದ್ದರೂ ತನ್ನದೆ ಆದ ಸುಂದರ ಪ್ರಕೃತಿಯಿಂದ ಭೇಟಿ ನೀಡುವವರ ಹೃದಯ ಕದಿಯುತ್ತದೆ ಈ ಜಲಪಾತ ತಾಣ.

ಎತ್ತರದಿಂದ ಭೋರ್ಗರೆಯುತ್ತಾ ದುಮ್ಮಿಕ್ಕಿ ಮೋಹಕ ಜಲಪಾತವನ್ನು ಸೃಷ್ಟಿಸುತ್ತಾಳೆ. ಚುಂಚನಕಟ್ಟೆಯು ಕೃಷ್ಣರಾಜನಗರದಿಂದ ೧೫ ಕಿ.ಮಿ ದೂರದಲ್ಲಿ ಇದೆ. ಶ್ರೀರಾಮನು ತನ್ನ ವನವಾಸಕಾಲದಲ್ಲಿ ತನ್ನ ಪತ್ನಿ ಸೀತಾದೇವಿಯೊಡನೆ ಇಲ್ಲಿಗೆ ಬಂದಿದ್ದನೆಂಬ ಐತಿಹ್ಯವಿದೆ. ಇಲ್ಲಿರುವ ಕೋದಂಡರಾಮ ದೇವಾಲಯವು ಪ್ರಸಿದ್ದಿ ಪಡೆದಿದೆ. ಇಲ್ಲಿಯ ವಿಶೇಷವೆಂದರೆ ಶ್ರೀರಾಮನ ಬಲಬದಿಗೆ ಸೀತಾದೇವಿಯ ವಿಗ್ರಹವಿದೆ ಇಲ್ಲಿರುವ ಜಲಪಾತವು ಕಾವೇರಿನದಿಯ ಮೊದಲ ಜಲಪಾತವಾಗಿದ್ದು ಇಲ್ಲಿ ಕರ್ನಾಟಕದಲ್ಲೆ ಹೆಸರುವಾಸಿಯಾದ ದನಗಳ ಜಾತ್ರೆ ಯು ಜನವರಿ ತಿಂಗಳಲ್ಲಿ ನಡೆದು ಮಕರ ಸಂಕ್ರಾಂತಿಯ ಹಿಂದಿನ ದಿನ ಶ್ರೀಕೋದಂಡರಾಮ ದೇವರ ರಥೋತ್ಸವ ನಡೆಯಲಿದ್ದು ಇದಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.

ಚುಂಚನಕಟ್ಟೆಯು ಮೈಸೂರಿನ ಕೃಷ್ಣರಾಜನಗರ ತಾಲೂಕಿನಲ್ಲಿದ್ದು ಜಲಪಾತ ತಾಣವು ಮೈಸೂರು ಪಟ್ಟಣದಿಂದ 57 ಕಿ.ಮೀ, ಕೆ.ಆರ್ ನಗರ ಪಟ್ಟಣದಿಂದ ಸುಮಾರು 16 ಕಿ.ಮೀ ದೂರದಲ್ಲಿ ನೆಲೆಸಿದೆ. ಮೈಸೂರು ಹಾಗೂ ಚುಂಚನಕಟ್ಟೆಗಳ ಮಧ್ಯೆ ಸಂಚರಿಸಲು ಸಾಕಷ್ಟು ಬಸ್ಸುಗಳು ಲಭ್ಯವಿದೆ. ಮೈಸೂರು – ಹಾಸನ ಹೆದ್ದಾರಿಯಲ್ಲಿ ಕೆ.ಆರ್ ನಗರ ಪಟ್ಟಣದಲ್ಲಿ ಎಡಗಡೆಗೆ ತಿರುವು ತೆಗೆದುಕೊಳ್ಳುವ ಮೂಲಕ ಈ ಜಲಪಾತಕ್ಕೆ ತೆರಳಬಹುದಾಗಿದೆ.