ನಕ್ಷತ್ರ ಆಮೆ ಸಾಗಾಟ : ಗೋಣಿಕೊಪ್ಪದಲ್ಲಿ ನಾಲ್ವರ ಬಂಧನ

21/11/2020

ಮಡಿಕೇರಿ ನ. 21 : ಅಕ್ರಮವಾಗಿ ನಕ್ಷತ್ರ ಆಮೆಯೊಂದನ್ನು ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಮತ್ತು ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ಘಟಕದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಿವಾಸಿಗಳಾದ ಲಕ್ಷ್ಮಣ(38), ರಾಮಪೋಗು(37), ನಾಗೇಶ(36) ಹಾಗೂ ತೆಲಂಗಾಣ ರಾಜ್ಯದ ಮೆಹಬೂಬ್ ನಗರ್ ಜಿಲ್ಲೆಯ ತೆಲುಗು ತಿಮ್ಮಪ್ಪ(34) ಅವರುಗಳು ಬಂಧಿತ ಆರೋಪಿಗಳು. ಸಾಗಾಟಕ್ಕೆ ಬಳಸಿದ ಕಾರೊಂದನ್ನು ಕೂಡ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆಂಧ್ರ ಪ್ರದೇಶದಿಂದ ಬೆಂಗಳೂರು, ಮೈಸೂರು, ಹುಣುಸೂರು ಮಾರ್ಗವಾಗಿ ಗೋಣಿಕೊಪ್ಪ ಪ್ರವೇಶಿಸಿದ ಕಾರನ್ನು ಎಪಿಎಂಸಿ ಬಳಿ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದರು. ಈ ಸಂದರ್ಭ ನಕ್ಷತ್ರ ಆಮೆ ಪತ್ತೆಯಾಗಿದ್ದು, ತಕ್ಷಣ ಆರೋಪಿಗಳನ್ನು ಬಂಧಿಸಿದರು.
ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ಘಟಕದ ಆಧೀಕ್ಷಕ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳದ ಅರಕ್ಷಕ ಉಪನಿರೀಕ್ಷಕಿ ಕು.ವೀಣಾ ನಾಯಕ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೆ.ಬಿ.ಸೋಮಣ್ಣ, ಟಿ.ಪಿ.ಮಂಜುನಾಥ್, ಎಂ.ಬಿ.ಗಣೇಶ್, ಪಿ.ಬಿ.ಮೊಣ್ಣಪ್ಪ ಹಾಗೂ ಸಿ.ಎಂ.ರೇವಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.