ಗ್ರಾ.ಪಂ.ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕರ್ತವ್ಯ ನಿರ್ವಹಿಸಿ: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ

21/11/2020

ಮಡಿಕೇರಿ ನ.21 : ಗ್ರಾಮ ಪಂಚಾಯಿತಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವುದರ ಜೊತೆಗೆ ಸವಾಲಿನಿಂದ ಕರ್ತವ್ಯ ನಿರ್ವಹಿಸುವಂತೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗ್ರಾ.ಪಂ.ಚುನಾವಣೆ ಹಿನ್ನೆಲೆ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಶನಿವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾ.ಪಂ.ಚುನಾವಣಾ ವೇಳಾಪಟ್ಟಿಯು ಸದ್ಯದಲ್ಲಿಯೇ ಘೋಷಣೆಯಾಗಲಿದೆ. ಆ ದಿಸೆಯಲ್ಲಿ ಶ್ರದ್ಧೆಯಿಂದ ಚುನಾವಣೆ ನಡೆಸಬೇಕಿದೆ. ಈ ಸಂಬಂಧ ಅಗತ್ಯ ತಯಾರಿ ಮಾಡಿಕೊಳ್ಳಬೇಕಿದೆ ಎಂದರು.
ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕಗೊಂಡವರು ತಮ್ಮ ಗ್ರಾ.ಪಂ.ವ್ಯಾಪ್ತಿಯ ಮತಗಟ್ಟೆ ಕೇಂದ್ರಗಳು ಸುಸ್ಥಿತಿಯಲ್ಲಿದೆಯೇ ಎಂಬುದನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಖಾತರಿಪಡಿಸಿಕೊಳ್ಳಬೇಕು. ಗ್ರಾ.ಪಂ.ಕಚೇರಿಯಲ್ಲಿ ಚುನಾವಣಾ ಕಚೇರಿಯನ್ನಾಗಿ ಮಾಡಿಕೊಂಡು ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಬೇಕು. ದೂರುಗಳು ಬರದಂತೆ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಚುನಾವಣಾ ಆಯೋಗದಿಂದ ಪ್ರತಿನಿತ್ಯ ಬರುವ ಆದೇಶಗಳನ್ನು ಕಡ್ಡಾಯವಾಗಿ ಚಾಚು ತಪ್ಪದೆ ಓದಬೇಕು. ಚುನಾವಣಾ ವೇಳಾಪಟ್ಟಿ, ನಾಮಪತ್ರ ಸ್ವೀಕಾರ, ಪರಿಶೀಲನೆ, ಮಾದರಿ ನೀತಿ ಸಂಹಿತೆ ಪಾಲನೆ ಮಾಡುವುದು ಹೀಗೆ ಪ್ರತಿಯೊಂದರ ಮಾಹಿತಿ ಇದ್ದು, ಚುನಾವಣೆ ನಡೆಸಬೇಕು ಎಂದು ಅನೀಸ್ ಕಣ್ಮಣಿ ಜಾಯ್ ಅವರು ವಿವರಿಸಿದರು.
ಚುನಾವಣಾ ಸಂದರ್ಭದಲ್ಲಿ ಯಾವುದೇ ರೀತಿಯ ಚ್ಯುತಿ ಬಾರದಂತೆ ನಿಯಮಾನುಸಾರ ಕರ್ತವ್ಯ ನಿರ್ವಹಿಸಬೇಕು. ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಬೇಕು ಎಂದು ಅವರು ಹೇಳಿದರು.
ಬ್ಯಾಲೆಟ್ ಪೇಪರ್ ಮುದ್ರಣ ಸಂಬಂಧ ಮುದ್ರಣಾಲಯಗಳನ್ನು ಗುರುತಿಸಿಕೊಳ್ಳುವುದು ಚುನಾವಣಾಧಿಕಾರಿಗಳ ಕರ್ತವ್ಯವಾಗಿದ್ದು, ಆ ನಿಟ್ಟಿನಲ್ಲಿ ಗಮನಹರಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳ ಜವಾಬ್ದಾರಿ ಹೆಚ್ಚಿನದ್ದಾಗಿದ್ದು, ಚುನಾವಣಾ ಕರ್ತವ್ಯವನ್ನು ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು. ಸಂಶಯಗಳಿದ್ದಲ್ಲಿ ಗಮನಕ್ಕೆ ತರಬೇಕು ಎಂದರು.
ಮಾಸ್ಟರ್ ತರಬೇತಿದಾರರಾದ ಕೆ.ಜೆ.ದಿವಾಕರ ಅವರು ಗ್ರಾ.ಪಂ.ಚುನಾವಣೆ ಸಂಬಂಧಿಸಿದಂತೆ ಮಾಹಿತಿ ನೀಡಿ ಚುನಾವಣೆ ಅತ್ಯಂತ ಮಹತ್ವ ಹಾಗೂ ಜವಾಬ್ದಾರಿಯುತ ಕರ್ತವ್ಯವಾಗಿದೆ ಎಂದರು.
ನಾಮಪತ್ರ ಪರಿಶೀಲನೆ, ಚುನಾವಣಾ ಚಿಹ್ನೆಗಳ ಹಂಚಿಕೆ, ಕ್ರಮಬದ್ಧವಾಗಿ ನಾಮ ನಿರ್ದೇಶಿತರಾದವರ ಪಟ್ಟಿ ನೀಡುವುದು, ಉಮೇದುವಾರಿಕೆ ಹಿಂತೆಗೆದುಕೊಳ್ಳುವಿಕೆ, ಅಂಚೆ ಮತಪತ್ರ ನೀಡಿಕೆ, ಅಭ್ಯರ್ಥಿಗಳ ಚುನಾವಣಾ ಪ್ರಚಾರ, ಸದಾಚಾರ ನೀತಿ ಸಂಹಿತೆ ಪಾಲಿಸುವುದು, ಮತದಾನ ದಿನ ಅನುಸರಿಸಬೇಕಾದ ಕ್ರಮಗಳು ಮತ್ತಿತರ ಬಗ್ಗೆ ಮಾಹಿತಿ ನೀಡಿದರು.
ನಾಮಪತ್ರಗಳನ್ನು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ಸ್ವೀಕರಿಸಬೇಕು. (ಮಧ್ಯೆ ಊಟದ ಬಿಡುವು ತೆಗೆದುಕೊಳ್ಳುವಂತಿಲ್ಲ) ಒಂದು ವೇಳೆ ಯಾವುದೇ ಅಭ್ಯರ್ಥಿಯು ನಾಮಪತ್ರ ಸ್ವೀಕರಿಸುವ ನಿಗದಿತ ಸಮಯದ ಮೊದಲು ಇಲ್ಲವೆ ಅನಂತರ ಸ್ವೀಕರಿಸಲು ಒತ್ತಾಯಿಸಿದಲ್ಲಿ ಅದನ್ನು ಒಪ್ಪಿಕೊಳ್ಳತಕ್ಕದ್ದಲ್ಲ. ನಾಮಪತ್ರ ಸ್ವೀಕರಿಸುವ ಸಂದರ್ಭದಲ್ಲಿ ಕೋವಿಡ್-19 ಸಂಬಂಧಿಸಿದಂತೆ ಮಾರ್ಗಸೂಚಿ ಪಾಲಿಸಬೇಕು ಎಂದರು.
ಮತ್ತೊಬ್ಬ ಮಾಸ್ಟರ್ ತರಬೇತಿದಾರರಾದ ಕೆ.ಸಿ.ದಯಾನಂದ ಅವರು ಮಾಹಿತಿ ನೀಡಿ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸ್ವೀಕೃತಿಯ ದಿನದಿಂದ ಮತ ಎಣಿಕೆಯವರೆಗೆ ಹಾಗೂ ಎಣಿಕೆಯ ನಂತರ ವರದಿಯನ್ನು ಸಲ್ಲಿಸುವ ಸಂಬಂಧ ಎಲ್ಲಾ ಅಗತ್ಯ ಪ್ರಪತ್ರ, ನಮೂನೆ, ಲಕೋಟೆ ಮತ್ತಿತರವನ್ನು ತಹಶೀಲ್ದಾರ್ ಕಚೇರಿಯಿಂದ ಖುದ್ದಾಗಿ ಸಂಗ್ರಹಿಸಿಕೊಳ್ಳಬೇಕು ಎಂದರು.
ಮಾಸ್ಟರ್ ತರಬೇತಿದಾರರಾದ ಪ್ರಶಾಂತ್ ಅವರು ಚುನಾವಣಾ ಅಧಿಸೂಚನೆ ಪ್ರಕಟಿಸಿದ ದಿನಾಂಕದಿಂದ ನಾಮಪತ್ರಗಳನ್ನು ಸಲ್ಲಿಸಲು ನಿಗದಿ ಮಾಡಿದ ಕೊನೆಯ ದಿನಾಂಕದವರೆಗೆ (ಎರಡೂ ದಿನಾಂಕಗಳೂ ಸೇರಿದಂತೆ) ಸಾರ್ವತ್ರಿಕ ರಜೆಯ ದಿನಗಳನ್ನು ಹೊರತುಪಡಿಸಿ, ಯಾವುದೇ ದಿನ ಉಮೇದುವಾರರು ನಾಮಪತ್ರಗಳನ್ನು ಸ್ವತಃ ಅಥವಾ ಅವರ ಸೂಚಕರ ಮೂಲಕ ಚುನಾವಣಾಧಿಕಾರಿಗೆ ಈ ಅಧಿಸೂಚನೆಯಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಸಲ್ಲಿಸಬಹುದು. ಪ್ರತಿ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚಿಗೆ ನಾಮಪತ್ರ ಸಲ್ಲಿಸಬಹುದು ಎಂದರು.
ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಅವರು ಗ್ರಾ.ಪಂ.ಚುನಾವಣೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ತಹಶೀಲ್ದಾರ್ ಮಹೇಶ್, ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಇತರರು ಇದ್ದರು.