ಕೊಡವ ಮಕ್ಕಡ ಕೂಟದಿಂದ 4 ಪುಸ್ತಕಗಳ ಅನಾವರಣ : ಕೊಡಗಿನಲ್ಲಿ ಕೊಡವ ಜಾನಪದ ಲೋಕ ಸೃಷ್ಟಿಯಾಗಲಿ : ಮಾಜಿ ಸಚಿವ ಎಂ.ಸಿ.ನಾಣಯ್ಯ ಅಭಿಲಾಷೆ

22/11/2020

ಮಡಿಕೇರಿ ನ.22 : ಕೊಡವ ಸಂಸ್ಕøತಿ ಆಚಾರ, ವಿಚಾರಗಳನ್ನು ಪ್ರತಿಬಿಂಬಿಸುವ ಜಾನಪದ ಲೋಕದ ಪರಿಕಲ್ಪನೆಯಡಿ ಸುವ್ಯವಸ್ಥಿತ ರೀತಿಯ ಯೋಜನೆಯೊಂದನ್ನು ಕೊಡಗಿನ ಕೊಡವ ಸಮಾಜಗಳು ರೂಪಿಸಬೇಕೆಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಕರೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ ವತಿಯಿಂದ ನಡೆದ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾನಪದ ತಜ್ಞ ಡಾ.ನಾಗೇಗೌಡ ಅವರ ಪರಿಶ್ರಮದಿಂದ ರಾಮನಗರದ 12 ಏಕರೆ ಪ್ರದೇಶದಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ರೂಪುಗೊಂಡಿರುವ ಜಾನಪದ ಲೋಕದ ಪರಿಕಲ್ಪನೆಯ ಕುರಿತು ಪ್ರಸ್ತಾಪಿಸಿದ ನಾಣಯ್ಯ ಅವರು, ಅದೇ ಮಾದರಿಯಲ್ಲಿ ಕೊಡಗಿನಲ್ಲು ಕೊಡವ ಸಂಸ್ಕøತಿಗೆ ಪೂರಕವಾದ ಅಂಶಗಳನ್ನು ಒಳಗೊಂಡ ಜಾನಪದ ಲೋಕ ರಚನೆಯಾಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದರು.
ಸರ್ಕಾರದ ಮೂಲಕ ಈ ಯೋಜನೆ ರೂಪುಗೊಂಡರೆ ಕೊಡವ ಹೆರಿಟೇಜ್ ಕಟ್ಟಡದ ಮಾದರಿಯಲ್ಲಿ ಯೋಜನೆ ಅಪೂರ್ಣಗೊಳ್ಳುವ ಸಾಧ್ಯತೆಗಳಿದೆ. ಆದ್ದರಿಂದ ಕೊಡವ ಸಮಾಜಗಳೇ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೊಡವ ಜಾನಪದ ಲೋಕದ ಸೃಷ್ಟಿಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಕೊಡವ ಹೆರಿಟೇಜ್ ಸೆಂಟರ್ ಕಟ್ಟಡ ಅಪೂರ್ಣಗೊಂಡಿರುವ ಬಗ್ಗೆ ಅವರು ಇದೇ ಸಂದರ್ಭ ಬೇಸರ ವ್ಯಕ್ತಪಡಿಸಿದರು. ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರೆ ಸಾಲದು, ಪ್ರತಿಯೊಬ್ಬರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯಾಸಕ್ತಿಯ ಬೆಳವಣಿಗೆ ಕೇವಲ ಕೊಡವ ಭಾಷೆಗೆ ಮಾತ್ರ ಸೀಮಿತವಾಗಬಾರದು, ಎಲ್ಲಾ ಭಾಷೆಗಳಲ್ಲು ಹೆಚ್ಚು ಹೆಚ್ಚು ಪುಸ್ತಕಗಳು ಹೊರ ಬರಬೇಕು. ರಾಜಕೀಯ ರಹಿತವಾಗಿ ಎಲ್ಲರು ಒಂದೇ ಎನ್ನುವ ಚಿಂತನೆಯನ್ನು ಪುಸ್ತಕಗಳ ರಚನೆ ಮತ್ತು ಅನಾವರಣದ ಮೂಲಕ ಪ್ರತಿಬಿಂಬಿಸಬೇಕೆಂದು ನಾಣಯ್ಯ ಕಿವಿ ಮಾತು ಹೇಳಿದರು.
ನೆಮ್ಮದಿಯ ಸಮಾಜ ನಿರ್ಮಾಣದೆಡೆಗೆ ಎಲ್ಲರೂ ಮನಸ್ಸು ಮಾಡಬೇಕು. ಬಡಿದಾಟದಿಂದ ಅಶಾಂತಿ ಮೂಡುತ್ತದೆಯೇ ಹೊರತು, ಬೇರೆ ಯಾವುದೇ ಪ್ರಯೋಜನವಿಲ್ಲವೆಂದು ಅವರು ಅಭಿಪ್ರಾಯಪಟ್ಟರು. ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಅಪ್ಪಣ್ಣ ಅವರು ಸಾಹಿತ್ಯ ಕ್ಷೇತ್ರಕ್ಕೆ ಮಾರ್ಗದರ್ಶಕರಾಗಿದ್ದಾರೆ ಎಂದರು.
ಇಂದು ಗುರು ಮತ್ತು ಗುರಿ ಇಲ್ಲದ ಸಮಾಜ ನಿರ್ಮಾಣವಾಗಿದೆ. ಉಪ ಕುಲಪತಿ ಹುದ್ದೆಯನ್ನು ಅಲಂಕರಿಸಬೇಕಾದರೂ ಹಣ ನೀಡಬೇಕಾದ ಭ್ರಷ್ಟ ವ್ಯವಸ್ಥೆಯಿದ್ದು, ಇಂದಿನ ಶಿಕ್ಷಣ ವ್ಯವಸ್ಥೆ ಯಾವ ಹಾದಿಯಲ್ಲಿ ಸಾಗಿದೆ ಎನ್ನುವುದನ್ನು ಅವಲೋಕಿಸಬೇಕಾಗಿದೆ ಎಂದು ನಾಣಯ್ಯ ಬೇಸರ ವ್ಯಕ್ತಪಡಿಸಿದರು.
::: ಅಕಾಡೆಮಿ ಆಗಿದ್ದು ಮೊಯ್ಲಿಯವರಿಂದಲ್ಲ :::
ಕೊಡವ ಸಾಹಿತ್ಯ ಅಕಾಡೆಮಿಯನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಸ್ಥಾಪಿಸಿದರು ಎಂದು ಕೆಲವು ಪುಸ್ತಕಗಳಲ್ಲಿ ಪ್ರತಿಬಿಂಬಿಸಲಾಗಿದೆ. ಆದರೆ, ಮೊಯ್ಲಿ ಅವರು ತುಳು ಸಾಹಿತ್ಯ ಅಕಾಡೆಮಿಯನ್ನು ರಚಿಸಿದಾಗ ವಿರೋಧ ಪಕ್ಷದ ನಾಯಕನಾಗಿದ್ದ ನಾನು ಕೊಡವ ಸಾಹಿತ್ಯ ಅಕಾಡೆಮಿ ರಚನೆಗೆ ಒತ್ತಡ ಹೇರಿದ್ದೆ.
ನಂತರ ಸರ್ಕಾರ ಬದಲಾಗಿ ಜೆ.ಹೆಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಕನ್ನಡ ಮತ್ತು ಸಂಸ್ಕøತಿ ಇಲಾಖಾ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರು ಎಲ್ಲಾ ಅಕಾಡೆಮಿಗಳನ್ನು ರದ್ದು ಮಾಡಿ ಒಂದೇ ಅಕಾಡೆಮಿ ಸ್ಥಾಪಿಸುವ ಚಿಂತನೆಯನ್ನು ಕ್ಯಾಬಿನೆಟ್ ಮುಂದಿಟ್ಟಿದ್ದರು. ಆದರೆ, ನಾನು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕೊಡವ ಅಕಾಡೆಮಿಯನ್ನು ರದ್ದು ಮಾಡಲು ಬಿಡುವುವಿಲ್ಲವೆಂದು ಮುಖ್ಯಮಂತ್ರಿ ಪಟೇಲ್ ಅವರ ಮೇಲೆ ಒತ್ತಡ ಹೇರಿದ ಪರಿಣಾಮ ಅಕಾಡೆಮಿ ಉಳಿಯಿತು. ಉಳ್ಳಿಯಡ ಪೂವಯ್ಯ ಅವರನ್ನು ಮೊದಲ ಅಧ್ಯಕ್ಷರನ್ನಾಗಿ ಹೆಸರಿಸಿದೆ ಎಂದು ನಾಣಯ್ಯ ಸ್ಪಷ್ಟಪಡಿಸಿದರು.
ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಸಂಗ್ರಹಿಸಿರುವ ಜಾನಪದೀಯ ಹಳೆಯ ಪರಿಕರಗಳ ಕುರಿತು ಮಾಹಿತಿಯನ್ನು ಒದಗಿಸುವ ‘ಚಂಗೀರ’ ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಅವರು, ಕೊಡಗು ಜಿಲ್ಲೆಯಲ್ಲಿ ಅನೇಕ ಸಾಹಿತಿಗಳಿದ್ದು, ಅವರನ್ನು ಗೌರವಿಸುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕು ಎಂದರು. ಜ್ಞಾನದ ಅಭಿವೃದ್ಧಿಗೆ ಪುಸ್ತಕ ಆಧಾರವಾಗಿದ್ದು, ಎಲ್ಲರೂ ಓದುವುದರೊಂದಿಗೆ ಬರಹಗಾರರನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ಹಿಂದಿನ ಬದುಕು, ಆಚಾರ-ವಿಚಾರಗಳನ್ನು ಯಾರೂ ಮರೆಯಬಾರದು. ಮುಂದಿನ ಪೀಳಿಗೆಗೆ ಇದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕೊಡವ ಸಾಹಿತ್ಯ ಅಕಾಡೆಮಿ ಮಾಡಲಿ ಎಂದರು. ಬಾಚರಣಿಯಂಡ ಅಪ್ಪಣ್ಣ ದಂಪತಿಗಳ ಸಾಹಿತ್ಯಾಸಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಅಪ್ಪಣ್ಣ ದಂಪತಿಯ ಕಂಡ ಅಮೆರಿಕ’ ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು, ದೇಶ ಸುತ್ತಿ ಕೋಶ ಓದು ಎನ್ನುವ ನಾಣ್ನುಡಿಗೆ ಅನ್ವಯವಾಗುವಂತೆ ಅಪ್ಪಣ್ಣ ದಂಪತಿಗಳು ದೇಶವನ್ನು ಸುತ್ತಿದ್ದಾರೆ, ಕೋಶವನ್ನೂ ಓದಿದ್ದಾರೆ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಅಪ್ಪಣ್ಣ ಅವರನ್ನು ನಡೆದಾಡುವ ಜ್ಞಾನಕೋಶವೆಂದು ಕೊಂಡಾಡಿದ ಅವರು, ಅಕಾಡೆಮಿ ಮೂಲಕ ಮ್ಯೂಸಿಯಂ ಸ್ಥಾಪಿಸಿ ಹಿರಿಯ ಸಾಹಿತಿಯ ಮನೆಯಲ್ಲಿರುವ ಹಳೆಯ ಪರಿಕರಗಳು ಸೇರಿದಂತೆ ಮತ್ತಷ್ಟು ಜಾನಪದೀಯ ವಸ್ತುಗಳನ್ನು ಪ್ರದರ್ಶಿಸುವ ವಿಶ್ವಾಸ ವ್ಯಕ್ತಪಡಿಸಿದರು.
‘ಅಪ್ಪಣ್ಣ ದಂಪತಿಯ ಕಂಡ ಯುರೋಪ್’ ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು, ಹಿರಿಯ ಸಾಹಿತಿ ಅಪ್ಪಣ್ಣ ಅವರಿಗೆ ಈಗಾಗÀಲೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆಯಬೇಕಾಗಿತ್ತು. ಆದರೆ, ಲಾಬಿ ಇಲ್ಲದೆ ಸರ್ಕಾರದಿಂದ ಯಾವುದೂ ದೊರೆಯುವುದಿಲ್ಲವೆಂದು ಅಭಿಪ್ರಾಯಪಟ್ಟರು.
ಎಲ್ಲರನ್ನು ಸ್ವೀಕಾರ ಮಾಡುವ ಮನೋಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು ಮತ್ತು ಎಲ್ಲಾ ಜನಾಂಗಗಳ ಆಚಾರ ವಿಚಾರಗಳನ್ನು ಗೌರವಿಸಬೇಕು ಎಂದರು. ಸಮಾಜದಲ್ಲಿ ಹಿರಿಯ ವಯಸ್ಸಿಗೆ ಮತ್ತು ನ್ಯಾಯಕ್ಕೆ ಬೆಲೆ ಇಲ್ಲದಾಗಿದ್ದು, ಹಣವೇ ದೊಡ್ಡದಾಗಿದೆಯೆಂದು ಬೆÉೀಸರ ವ್ಯಕ್ತಪಡಿಸಿದರು.
ಯಾರೇ ಯಾವುದೇ ಕಾರ್ಯಗಳನ್ನು ಮಾಡಿದರು ಜಾತಿ ಆಧಾರದಲ್ಲಿ ನೋಡುವುದು ಸರಿಯಲ್ಲ. ಕೊಡಗಿನಲ್ಲಿ ಅನೇಕ ವೀರ ಯೋಧರುಗಳಿದ್ದಾರೆ, ಆದರೆ, ಇವರ ಕುರಿತಾಗಿ ಕಾರ್ಯಕ್ರಮಗಳು ನಡೆದಾಗ ಅದು ಕೇವಲ ಆಯಾ ಕುಟುಂಬಕ್ಕೆ ಮಾತ್ರ ಸೀಮಿತವಾದ ಕಾರ್ಯಕ್ರಮವೆಂದು ಇತರರು ಆ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳದೆ ಇರುವುದು ಕಂಡು ಬರುತ್ತಿದೆ. ಈ ರೀತಿಯ ಬೆಳವಣಿಗೆ ಆಗಬಾರದು ಎಂದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಸಿದ ಕುಟ್ಟಪ್ಪ, ಹಿರಿಯ ಸಾಹಿತಿ ಅಪ್ಪಣ್ಣ ಅವರು ಮಹಾನ್ ಗ್ರಂಥ ಬರೆಯಲಿ ಎಂದು ಶುಭ ಹಾರೈಸಿದರು.
ಮೈಸೂರು ಶಾರದಾ ಜ್ಯುವೆಲ್ಲರ್ಸ್ ಮಾಲೀಕ ಎಸ್.ಬಿ.ಅರುಣಾಚಲ ಅವರು ಮಾತನಾಡಿ, ಅಪ್ಪಣ್ಣ ಅವರು ತನಗೆ ಗುರುಗಳಾಗಿದ್ದು, ಅವರ ಮಾರ್ಗದರ್ಶನದ ಮೂಲಕವೇ ತಾವು ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಯಿತೆಂದು ಅಭಿಪ್ರಾಯಪಟ್ಟರು.
ಅಂತರರಾಷ್ಟ್ರೀಯ ಹಾಕಿ ಪಟು ಬೊಳ್ಳಜಿರ ಮಯೂರ್ ಸುಬ್ಬಯ್ಯ ಮಾತನಾಡಿ, ಕೊಡವ ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಸಕಾರಾತ್ಮಕ ಆಲೋಚನೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.
ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಮಾತನಾಡಿ, ಇಂದಿನ ಸಮಾಜದ ಅಂಕುಡೊಂಕುಗಳ ಬಗ್ಗೆ ತಮ್ಮ ಸ್ವ ಅನುಭವವನ್ನು ಹಂಚಿಕೊಂಡರು. ಪುಸ್ತಕಗಳನ್ನು ಅನಾವರಣಗೊಳಿಸುವುದಕ್ಕೆ ಶ್ರಮಿಸಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹಾಗೂ ಬಳಗವನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿಕೊಂಡರು. ಮಹಾನ್ ಗ್ರಂಥ ರಚಿಸುವ ಪ್ರಯತ್ನ ನಡೆಸುವುದಾಗಿ ಅವರು ಇದೇ ಸಂದರ್ಭ ತಿಳಿಸಿದರು.
ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ, ಒಂದೇ ಬಾರಿಗೆ ನಾಲ್ಕು ಪುಸ್ತಕಗಳನ್ನು ಹೊರ ತರುವ ಮೂಲಕ ಕೊಡವ ಮಕ್ಕಡ ಕೂಟ ನಿಸ್ವಾರ್ಥ ಸೇವೆಯ ದೊಡ್ಡ ಸಾಧನೆಯನ್ನೆ ಮಾಡಿದೆ ಎಂದರು.
ಅಭಿನಂದನಾ ಗ್ರಂಥ ‘ಒತ್ತಜೋಡಿ’ಯನ್ನು ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಅನಾವರಣಗೊಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು, ಯುವ ಸಮೂಹ ವ್ಯಾಟ್ಸ್ ಅಪ್ ಹಾಗೂ ಫೇಸ್ ಬುಕ್‍ನಲ್ಲಿ ಕಾಲಹರಣ ಮಾಡದೆ ಕೊಡವ ಸಾಹಿತ್ಯ ಮತ್ತು ಸಂಸ್ಕøತಿಯ ಬೆಳವಣಿಗೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಮೆಂಟ್ ಬಾಕ್ಸ್‍ಗಳಲ್ಲಿ ಕೇವಲ ಕಮೆಂಟ್‍ಗಳನ್ನು ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲವೆಂದು ಅಭಿಪ್ರಾಯಪಟ್ಟರು.
ಬೊಳ್ಳಜಿರ ದೇಚಮ್ಮ ಅಯ್ಯಪ್ಪ ಪ್ರಾರ್ಥಿಸಿ, ಹಿರಿಯ ಸಾಹಿತಿ ಅಪ್ಪಣ್ಣ ಅವರನ್ನು ಸಭೆಗೆ ಪರಿಚಯಿಸಿದರು. ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಸ್ವಾಗತಿಸಿ, ಬಾಚರಣಿಯಂಡ ಹ್ಯಾರಿ ತಮ್ಮಯ್ಯ ವಂದಿಸಿದರು. ಕೂಟದ ನಿರ್ದೇಶಕಿ ಬಾಳೆಯಡ ದಿವ್ಯ ಮಂದಪ್ಪ ಕಾರ್ಯಕ್ರಮ ನಿರೂಪಿಸಿದರು.
::: ಸನ್ಮಾನ :::
ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ದಂಪತಿಗಳನ್ನು ಕೊಡವ ಮಕ್ಕಡ ಕೂಟದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಒಡಿಕತ್ತಿ ನೀಡಿ ಗೌರವಿಸಲಾಯಿತು.