ಧಾರೆಶಾಸ್ತ್ರ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಮಡಿಕೇರಿಯ ಸ್ವಾತಿ

22/11/2020

ಮಡಿಕೇರಿ ನ.22 : ವಿವಾಹ ಸಮಾರಂಭದಂದೇ ಸ್ಪರ್ಧಾತ್ಮಕ ಪರೀಕ್ಷೆಯೂ ಬಂದ ಕಾರಣ ನವವಧು ಧಾರೆಶಾಸ್ತ್ರ ಮುಗಿಸಿ ನಿಗಧಿತ ಸಮಯದಲ್ಲಿ ಪರೀಕ್ಷೆ ಬರೆದ ಪ್ರಸಂಗ ಮಡಿಕೇರಿಯಲ್ಲಿ ನಡೆದಿದೆ.
ನಗರದ ಅಶೋಕಪುರ ಬಡಾವಣೆಯ ವಧು ಸ್ವಾತಿ, ಸುಂಟಿಕೊಪ್ಪದ ಮಧುರಮ್ಮ ಪಟ್ಟಣದ ವರ ಸುರೇಶ್ ಅವರೊಂದಿಗೆ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಸಪ್ತಪದಿ ತುಳಿದು ಮನೆಮಂದಿ ಹಾಗೂ ನೆಂಟರಿಷ್ಟರೊಂದಿಗೆ ದಿನಪೂರ್ತಿ ಸಂಭ್ರಮಿಸಬೇಕಾಗಿತ್ತು. ಆದರೆ ವಿವಾಹದ ದಿನವೇ ಡಿಸಿಸಿ ಬ್ಯಾಂಕ್ ಸ್ಪರ್ಧಾತ್ಮಕ ಪರೀಕ್ಷೆಯೂ ಬಂದ ಕಾರಣ ಧೃತಿಗೆಡದ ನವಜೋಡಿಯ ಕುಟುಂಬದವರು ಸ್ವಾತಿ ಪರೀಕ್ಷೆಗೆ ಅಡ್ಡಿಯಾಗದಂತೆ ಬೆಳಗ್ಗೆ 6.30 ರಿಂದ 9 ಗಂಟೆಯೊಳಗಿದ್ದ ಶುಭಲಗ್ನದಲ್ಲಿ ಧಾರೆಶಾಸ್ತ್ರ ಮುಗಿಸಿ ಪರೀಕ್ಷೆ ಬರೆಯಲು ಸ್ವಾತಿಗೆ ಅವಕಾಶ ಕಲ್ಪಿಸಿಕೊಟ್ಟರು.
ವಧು ಧಾರೆ ಸೀರೆಯಲ್ಲೇ ಜೂನಿಯರ್ ಕಾಲೇಜ್‍ನ ಪರಿಕ್ಷಾ ಕೇಂದ್ರಕ್ಕೆ ಹಾಜರಾದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ವಾತಿ ಇಂತಹದ್ದೊಂದು ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದು ಕುಟುಂಬದವರು ಧೈರ್ಯ ತುಂಬಿದ್ದರು. ನಾನೂ ಕೂಡ ಪರೀಕ್ಷೆ ಬರೆಯಲು ಕಳೆದ 9 ತಿಂಗಳಿನಿಂದ ತಯಾರಿ ನಡೆಸಿದ್ದೆ. ಪರೀಕ್ಷೆ ಬರೆಯುವ ಉದ್ದೇಶದಿಂದಲೇ ಮದುವೆ ಶಾಸ್ತ್ರಗಳನ್ನು ಸ್ವಲ್ಪ ಆತುರವಾಗಿಯೇ ಮುಗಿಸಿದ್ದೇವೆ. ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತೇನೆ ಎನ್ನುವ ವಿಶ್ವಾಸವಿದೆ ವಿಶ್ವಾಸ ವ್ಯಕ್ತಪಡಿಸಿದರು.
ಪರೀಕ್ಷೆ ಬರೆದ ನಂತರ ಸ್ವಾತಿ ಆರತಕ್ಷತೆಯಲ್ಲಿ ಪಾಲ್ಗೊಂಡರು.