ವಿಂದ್ಯಾಚಲ ನಿರ್ಲಕ್ಷ್ಯ ಹೊಂದಿದ ಕ್ಷೇತ್ರ

23/11/2020

ಸೊನಭದ್ರ(ಉತ್ತರ ಪ್ರದೇಶ) ನ.23 : ಸ್ವಾತಂತ್ರ್ಯ ನಂತರ ದಶಕಗಳ ಕಾಲ ನಿರ್ಲಕ್ಷ್ಯ ಹೊಂದಿದ ಯಾವುದಾದರೂ ಕ್ಷೇತ್ರವಿದ್ದರೆ ಅದು ಕುಡಿಯುವ ನೀರಿನ ಸೌಲಭ್ಯ ಯೋಜನೆ. ವಿಂದ್ಯಾಚಲ ಅಥವಾ ಬುಂದೇಲ್ ಖಂಡ್ ಗಳಲ್ಲಿ ಸಾಕಷ್ಟು ಸಂಪನ್ಮೂಲಗಳಿದ್ದರೂ ಕೂಡ ಕೊರತೆಯ ಪ್ರದೇಶಗಳಾಗಿ ಈ ಪ್ರದೇಶಗಳು ಕಂಡವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಲ್ಲೆಲ್ಲ ಸಾಕಷ್ಟು ನದಿಗಳು, ಹಳ್ಳ-ಕೊಳ್ಳಗಳಿದ್ದರೂ ಕೂಡ ಹಲವು ಪ್ರದೇಶಗಳು ಬರಡಾಗಿ ಮತ್ತು ಬರಗಾಲಪೀಡಿತ ಪ್ರದೇಶಗಳಾಗಿ ಕಂಡವು. ಹೀಗಾಗಿ ಇಲ್ಲಿಂದ ಹಲವು ಜನರು ಬೇರೆ ಕಡೆಗೆ ಉದ್ಯೋಗ, ಜೀವನೋಪಾಯಕ್ಕಾಗಿ ವಲಸೆ ಹೋಗಬೇಕಾಗಿ ಬಂತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಉತ್ತರ ಪ್ರದೇಶದ ಮಿರ್ಜಾಪುರ ಮತ್ತು ಸೊನಭದ್ರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಪ್ರತಿ ಮನೆಗೆ ನೀರಿನ ಯೋಜನೆ ಜಾರಿಗೆ ಬಂದು ಒಂದು ವರ್ಷ ಕಳೆದಿದೆ. ಇದುವರೆಗೆ 2.60 ಕೋಟಿಗೂ ಹೆಚ್ಚು ಮಂದಿಗೆ ಕುಡಿಯುವ ನೀರನ್ನು ನಳ್ಳಿಗಳ ಮೂಲಕ ಅವರ ಮನೆಗಳಿಗೆ ಒದಗಿಸಲಾಗಿದೆ. ಇಂದು ಆರಂಭಗೊಂಡ ಯೋಜನೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ವಿಂಧ್ಯ ಪ್ರದೇಶದಲ್ಲಿ ಕಳೆದ 70 ವರ್ಷಗಳಲ್ಲಿ ಕುಡಿಯುವ ನೀರನ್ನು ಕೇವಲ 398 ಗ್ರಾಮಗಳಿಗೆ ನೀಡಲಾಗಿದೆ. ಇಂದು 3 ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಯೋಜನೆಗಳನ್ನು ಕೊಂಡೊಯ್ಯುವ ಉದ್ದೇಶವಿದೆ ಎಂದರು.