ಜಾಲತಾಣದ ತಪ್ಪಿಗೆ ಜೈಲು ಶಿಕ್ಷೆ

23/11/2020

ತಿರುವನಂತಪುರಂ ನ.23 : ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಅಥವಾ ಬೆದರಿಕೆ ಹಾಕಿದರೆ 5 ವರ್ಷ ಜೈಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆಗೆ ಕೇರಳ ರಾಜ್ಯಪಾಲರು ಸಹಿ ಹಾಕಿದ್ದಾರೆ.
ಆಡಳಿತರೂಢ ಎಲ್‍ಡಿಎಫ್ ಸರ್ಕಾರ ಕೇರಳ ಪೊಲೀಸ್ ಕಾಯ್ದೆಗೆ ಹೊಸದಾಗಿ ಸೆಕ್ಷನ್(ಎ) ಸೇರಿಸಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಈಗ ಅಧಿವೇಶನ ನಡೆಯುತ್ತಿಲ್ಲ. ಹೀಗಾಗಿ ಸರ್ಕಾರ ಸುಗ್ರೀವಾಜ್ಞೆಯನ್ನು ಮೂಲಕ ಕಾಯ್ದೆಯನ್ನು ಜಾರಿಗೆ ತಂದಿದ್ದು, ಶನಿವಾರ ರಾಜ್ಯಪಾಲ ಆರಿಫ್ ಮೊಹಮ್ಮದ್‍ಖಾನ್ ಸಹಿ ಹಾಕಿದ್ದಾರೆ. ಈ ಸೆಕ್ಷನ್ ಅಡಿಯಲ್ಲಿ ವ್ಯಕ್ತಿಯೊಬ್ಬ ಬೇರೊಬ್ಬ ವ್ಯಕ್ತಿಗೆ ಯಾವುದೇ ಸಂವಹನ ವಿಧಾನದ ಮೂಲಕ ನಿಂದನೆ ಅಥವಾ ಬೆದರಿಕೆ ಹಾಕಿದರೆ ಐದು ವರ್ಷಗಳ ಜೈಲು ಶಿಕ್ಷೆ ಅಥವಾ 10 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಲು ಕಾಯ್ದೆ ಅವಕಾಶ ನೀಡುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಉದ್ದೇಶಪೂರ್ವವಾಗಿ ವ್ಯಕ್ತಿಗಳ ನಿಂದನೆಯಾಗುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಈ ಕಾಯ್ದೆಯ ಅಗತ್ಯವಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮರ್ಥಿಸಿಕೊಂಡಿದ್ದಾರೆ.