17 ವರ್ಷಗಳಲ್ಲಿಯೇ ಕನಿಷ್ಠ ತಾಪಮಾನ

23/11/2020

ನವದೆಹಲಿ ನ.23 : ತೀವ್ರ ಚಳಿಗೆ ರಾಷ್ಟ್ರ ರಾಜಧಾನಿ ದೆಹಲಿ ಜನತೆ ತತ್ತರಿಸಿ ಹೋಗಿದ್ದು, ಇಂದು ದೆಹಲಿಯಲ್ಲಿ ಕಳೆದ 17 ವರ್ಷಗಳಲ್ಲಿಯೇ ಕನಿಷ್ಠ ತಾಪಮಾನ ದಾಖಲಾಗಿದೆ.
ಈ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ದೆಹಲಿಯಲ್ಲಿ ಭಾನುವಾರ ಮುಂಜಾನೆ ಕನಿಷ್ಠ ತಾಪಮಾನ 6.9 ಡಿಗ್ರಿ ಸೆಲ್ಸಿಯಸ್‍ಗೆ ಕುಸಿದಿದ್ದು, ಇದು 2003ರ ಬಳಿಕ ನವೆಂಬರ್‍ತಿಂಗಳಲ್ಲಿ ದಾಖಲಾದ ಅತಿ ಕನಿಷ್ಠ ತಾಪಮಾನವಾಗಿದೆ ಎಂದು ಹೇಳಿದೆ.
ದೆಹಲಿಯಲ್ಲಿ ಕಳೆದ ಶುಕ್ರವಾರ 7.5 ಡಿಗ್ರಿ ಸೆಲ್ಸಿಯಸ್‍ಕನಿಷ್ಠ ತಾಪಮಾನ ದಾಖಲಾಗಿತ್ತು. ಅದು 14 ವರ್ಷಗಳಲ್ಲಿ ನವೆಂಬರ್‍ತಿಂಗಳಲ್ಲಿ ದಾಖಲಾದ ಅತಿ ಕನಿಷ್ಠ ಉಷ್ಣಾಂಶ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿತ್ತು. ಆದರೆ ಇಂದು ಅದಕ್ಕಿಂತಲೂ ಕನಿಷ್ಛ ತಾಪಮಾನ ದಾಖಲಾಗಿದೆ.
ಇನ್ನು ಸಫ್ದರ್ಜಂಗ್ ವೀಕ್ಷಣಾಲಯದ ಪ್ರಕಾರ ದೆಹಲಿಯಲ್ಲಿ ಭಾನುವಾರ ಕನಿಷ್ಠ ಉಷ್ಣಾಂಶ 6.9 ಡಿಗ್ರಿ ಸೆಲ್ಸಿಯಸ್‍ದಾಖಲಾಗಿದೆ. 2003ರ ನವೆಂಬರ್‍ನಲ್ಲಿ 6.1 ಡಿಗ್ರಿ ಸೆಲ್ಸಿಯಸ್‍ಕನಿಷ್ಠ ತಾಪಮಾನ ದಾಖಲಾಗಿತ್ತು ಎಂದು ಐಎಂಡಿಯ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.