ಗ್ರಾ.ಪಂ ಚುನಾವಣೆ : ಸಂಪಾಜೆ ಸುತ್ತಮುತ್ತಲ ಗ್ರಾಮದಲ್ಲಿ ಎ.ಎಸ್.ಪೊನ್ನಣ್ಣ ಸಮಾಲೋಚನೆ

November 23, 2020

ಮಡಿಕೇರಿ ನ.23 : ಗ್ರಾ.ಪಂ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳು ರಾಜಕೀಯ ಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ. ಕೆಪಿಸಿಸಿ ವಕ್ತಾರ ಹಾಗೂ ಮಾನವ ಹಕ್ಕು ಮತ್ತು ಆರ್‌ಟಿಐ ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರು ಸಂಪಾಜೆ, ಪೆರಾಜೆ ಹಾಗೂ ಚೆಂಬು ವಲಯಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದರು.
ಪೆರಾಜೆಯ ಶ್ರೀಶಾಸ್ತಾವು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಅವರು, ವಲಯಾಧ್ಯಕ್ಷ ಜಯರಾಮ ಅವರೊಂದಿಗೆ ಚರ್ಚಿಸಿದರು.
ಚೆಂಬು ವಲಯಾಧ್ಯಕ್ಷ ರವಿರಾಜ್ ಹೊಸೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ 15ಕ್ಕೂ ಹೆಚ್ಚು ಇತರ ಪಕ್ಷಗಳ ಕಾರ್ಯಕರ್ತರನ್ನು ಕಾಂಗ್ರೆಸ್ ಬಾವುಟ ನೀಡಿ ಬರಮಾಡಿಕೊಂಡರು.
ನಂತರ ಮಾತನಾಡಿದ ಎ.ಎಸ್.ಪೊನ್ನಣ್ಣ ಕಾಂಗ್ರೆಸ್ ಪಕ್ಷ ಜನರಿಗೆ ಅನಿವಾರ್ಯ ಎಂಬ ಸಂದೇಶವನ್ನು ಹೊಸ ಸದಸ್ಯರ ಸೇರ್ಪಡೆಯಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಇತ್ತೀಚೆಗೆ ಸಿಡಿಲು ಬಡಿದು ಮನೆ ಹಾನಿಗೊಳಗಾದ ಬಗ್ಗೆ ನಿವಾಸಿ ಕಾಚೇಲು ವಾಸುದೇವ ಅವರು ಇದೇ ಸಂದರ್ಭ ಹೇಳಿಕೊಂಡಾಗ ಪೂರಕವಾಗಿ ಸ್ಪಂದಿಸಿದರು. ರಸ್ತೆ ಅವ್ಯವಸ್ಥೆ ಬಗ್ಗೆ ಸ್ಥಳೀಯ ಗ್ರಾಮಸ್ಥರು ಗಮನ ಸೆಳೆದರು.
ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್ ಅವರು ಮಾತನಾಡಿ ಕಾಂಗ್ರೆಸ್ ಜನಪರ ಕಾಳಜಿ ಹೊಂದಿರುವ ಪಕ್ಷವಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕೆಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ತಿಳಿಸಿದರು.
ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಪಿ.ಎಲ್.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಪ್ರಮುಖರು ಮುಂಬರುವ ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಟಿ.ಎಂ.ಶಾಹಿದ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹನೀಫ್ ಸಂಪಾಜೆ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸುರಯ್ಯ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ನಾಪೋಕ್ಲು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಜೇಶ್ವರಿ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಅಧ್ಯಕ್ಷ ಆರ್.ಪಿ.ಚಂದ್ರಶೇಖರ್, ಮತ್ತಿತರ ಕಾರ್ಯಕರ್ತರು ಹಾಜರಿದ್ದರು.
ಗುಂಡಿಮಜಲು ಗಣಪಯ್ಯ ಕಾರ್ಯಕ್ರಮ ನಿರೂಪಿಸಿದರು. ಸೂರಜ್ ಹೊಸೂರು ಸ್ವಾಗತಿಸಿ, ರವಿರಾಜ್ ವಂದಿಸಿದರು.