ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 30.12 ಲಕ್ಷ ರೂ. ನಿವ್ವಳ ಲಾಭ : ನ.25 ರಂದು ಮಹಾಸಭೆ

23/11/2020

ಮಡಿಕೇರಿ ನ.23 : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2019-20ನೇ ಸಾಲಿನಲ್ಲಿ 11,260.15 ಲಕ್ಷಗಳ ವಹಿವಾಟು ನಡೆಸುವ ಮೂಲಕ 30.12 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಪಡೆದ ಲಾಭಾಂಶದ ಮೇಲೆ ಶೇ.12ರಂತೆ ಸದಸ್ಯರುಗಳಿಗೆ ಡಿವಿಡೆಂಡ್ ನೀಡುವ ವಿಚಾರವನ್ನು ಮಹಾಸಭೆಯ ಒಪ್ಪಿಗೆಗೆ ಮಂಡಿಸಲು ತೀರ್ಮಾನಿಸಲಾಗಿದೆ. ಸಂಘದ 43ನೇ ಮಹಾಸಭೆ ನ.25 ರಂದು ಚೆಟ್ಟಳ್ಳಿಯ ನರೇಂದ್ರ ಮೊದಿ ಭವನದಲ್ಲಿ ನಡೆಯಲಿದೆ ಎಂದರು.
ಸಂಘದಲ್ಲಿ 2019-20ನೇ ಸಾಲಿಗೆ ಅನ್ವಯವಾಗುವಂತೆ ಒಟ್ಟು ‘ಎ’ ತರಗತಿಯ 1153 ಸದಸ್ಯರಿದ್ದು, ಸದಸ್ಯರಿಂದ ಪಾಲು ಬಂಡವಾಳವಾಗಿ ಸಂಗ್ರಹಿಸಿದ 117.45 ಲಕ್ಷ ರೂ.ಗಳಿರುತ್ತದೆ. ಕ್ಷೇಮ ನಿಧಿ ಸೇರಿ ಇತರೆ ನಿಧಿಗಳು 192.26 ಲಕ್ಷ ರೂ.ಗಳು ಹಾಗೂ ನಿರಖು ಠೇವಣಿ, ಸಂಚಯ ಠೇವಣಿ ಹಾಗೂ ಇತರೆ ಠೇವಣಿ ಸೇರಿ ಒಟ್ಟು 1014.69 ಲಕ್ಷ ರೂ.ಗಳಿರುವುದಾಗಿ ತಿಳಿಸಿದರು.
::: ಸಾಲ ವಿತರಣೆ :::
ಸಂಘದಿಂದ ಸದಸ್ಯರ ಅವಶ್ಯಕತೆಳಿಗೆ ಅನುಗುಣವಾಗಿ ಕೆ.ಸಿ.ಸಿ. ಫಸಲು ಸಾಲ ಸೇರಿ 2019-20ನೇ ಸಾಲಿನಲ್ಲಿ 1693.70 ಲಕ್ಷ ರೂ.ಗಳನ್ನು ವಿತರಿಸಿರುವುದಾಗಿ ಹೇಳಿದರು.
ಸಂಘವು ನೇರವಾಗಿ ವಿವಿಧ ಕಂಪೆನಿಗಳಿಂದ ರಸಗೊಬ್ಬರ ಖರೀದಿಸಿ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡುತ್ತಿದ್ದು, 2019-20ನೇ ಸಾಲಿನಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ಬೇಕಾದ ರಸಗೊಬ್ಬರ, ಹತ್ಯಾರು, ಸಿಮೆಂಟ್ ಹಾಗೂ ಇತರೆ ಅಗತ್ಯ ಸಾಮಗ್ರಿ ಬಾಪ್ತು 483.94 ಲಕ್ಷ ರೂ.ಗಳ ವಹಿವಟು ನಡೆಸಿ 15.55 ಲಕ್ಷ ವ್ಯಾಪಾರ ಲಾಭಗಳಿಸಿದೆಯೆಂದು ಹರ್ಷ ವ್ಯಕ್ತಪಡಿಸಿದರು.
ಸರಕಾರದ ಸಾಲಮನ್ನಾ ಸೌಲಭ್ಯ ಸಂಘದ ಸದಸ್ಯರುಗಳಿಗೆ ಸಮರ್ಪಕವಾಗಿ ತಲುಪಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಬಲ್ಲಾರಂಡ ಮಣಿ ಉತ್ತಪ್ಪ ಅವರು, ಒಬ್ಬೊಬ್ಬ ರೈತರಿಗೆ ಒಂದೊಂದು ರೀತಿಯಲ್ಲಿ ಸಾಲ ಮನ್ನಾವಾಗಿದ್ದರೆ, 64 ಮಂದಿ ಸದಸ್ಯರಿಗೆ ಇನ್ನೂ ಸೌಲಭ್ಯ ದೊರಕಿಲ್ಲವೆಂದು ಹೇಳಿದರು.
::: ಪುಣ್ಯಕೋಟಿ ವಸತಿ ಗೃಹ :::
ಸಂಘ ‘ಪುಣ್ಯಕೋಟಿ’ ಹೆಸರಿನ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಮೂರು ವ್ಯಾಪಾರ ಮಳಿಗೆ ಹಾಗೂ ಮೂರು ಅತಿಥಿಗೃಹದ ವ್ಯವಸ್ಥೆ ಇದೆ. ಈ ನೂತನ ಕಟ್ಟಡದಲ್ಲಿ ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿರುವ ರೀತಿಯ ಪಂಚಮುಖದ ಪಶುಪತಿ ಲಿಂಗÀವನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಇದನ್ನು ಕಾರ್ಕಳದ ಶಿಲ್ಪಿಗಳು ರಚಿಸಿದ್ದಾರೆ. ಅಲ್ಲದೆ ಗೋಮಾತೆ ಕಾಮಧೇನು ಹಾಗೂ ನಾಗದೇವತೆಯ ಮೂರ್ತಿಯನ್ನು ಕೂಡ ನಿಲ್ಲಿಸಲಾಗುವುದು. ಈ ಎಲ್ಲಾ ಯೋಜನೆಗಳು 2021 ಜನವರಿ 15 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಮಣಿಉತ್ತಪ್ಪ ಮಾಹಿತಿ ನೀಡಿದರು.
::: ಹಂದಿಗೂಡು ವಿರುದ್ಧ ಹೋರಾಟ :::
ಸಂಘದ ಜಾಗದ ಬಳಿಯಲ್ಲೇ ಖಾಸಗಿ ವ್ಯಕ್ತಿಯೊಬ್ಬರು ನಿಯಮ ಬಾಹಿರವಾಗಿ ಹಂದಿಗೂಡು ನಿರ್ಮಿಸಿ ವಾತಾವರಣವನ್ನು ಕಲುಷಿತಗೊಳಿಸಿರುವ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಕುರಿತು ಸಂಘದ ಮಹಾಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಹಂದಿಗೂಡು ತೆರವಿಗಾಗಿ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಇದಕ್ಕೂ ಸ್ಪಂದನೆ ದೊರೆಯದಿದ್ದಲ್ಲಿ ನ್ಯಾಯಾಲಯದ ಮೆಟ್ಟಿಲೇರಿ ಹೋರಾಟ ನಡೆಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮರದಾಳು ಉಲ್ಲಾಸ, ನಿರ್ದೇಶಕರುಗಳಾದ ಕೊಂಗೇಟಿರ ವಾಣಿ ಕಾಳಪ್ಪ, ಕಣಜಾಲು ಪೂವಯ್ಯ, ಪೇರಿಯನ ಎಸ್.ಪೂಣಚ್ಚ ಹಾಗೂ ಅಡಿಕೇರ ಈ.ಮುತ್ತಪ್ಪ ಉಪಸ್ಥಿತರಿದ್ದರು.