ವಿರಾಜಪೇಟೆಯಲ್ಲಿ ಸಭೆ : ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯ : ಐಜಿಪಿ ವಿಪುಲ್ ಕುಮಾರ್

23/11/2020

ಮಡಿಕೇರಿ ನ.23 : ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ದಕ್ಷಿಣ ವಲಯ ಐ.ಜಿ.ಪಿ. ವಿಪುಲ್ ಕುಮಾರ್ ಹೇಳಿದರು.
ನಗರದ ಪೊಲೀಸ್ ಠಾಣೆಗಳ ಸಮುಚ್ಛಯದ ಅವರಣದಲ್ಲಿ ಆಯೋಜಿತ ಸಾರ್ವಜನಿಕರ ಕುಂದು ಕೊರತೆಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ, ಸಮಾಜ ಘಾತುಕ ಶಕ್ತಿಗಳ ವಿರುದ್ಧ ಹೋರಾಟ ನಡೆಸಲು ಇಲಾಖೆಯೊಂದಿಗೆ ಪ್ರತಿಯೊಬ್ಬರು ಸಹಕಾರ ನೀಡಿದಲ್ಲಿ ಅಪರಾಧಗಳನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ ಎಂದರು.
ನಗರದ ಮೊಗರಗಲ್ಲಿಯ ನಿವಾಸಿಯೊಬ್ಬರು ಮಾತನಾಡಿ, ನಗರದಲ್ಲಿ ಕೆಲವು ತಿಂಗಳ ಹಿಂದಿನಿಂದ ಅಕ್ರಮ ಗಾಂಜಾ ವ್ಯವಹಾರ ವ್ಯಾಪಕವಾಗಿತ್ತು. ಆದರೆ ಇದೀಗ ಇಲಾಖೆ ಕಟ್ಟುನಿಟ್ಟಿನ ಕ್ರಮದಿಂದ ಗಾಂಜಾ ದಂಧೆÉಕೋರರನ್ನು ನಿಗ್ರಹಿಸಿರುವುದು ಶ್ಲಾಘನೀಯ ಎಂದರು.
ಅಮ್ಮತ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೊಲೀಸ್ ಉಪಕೇಂದ್ರ ಶಿಥಿಲಾವ್ಯವಸ್ಥೆಯಲ್ಲಿದ್ದು, ನೂತನ ಕಟ್ಟಡ ಒದಗಿಸಲು ಗ್ರಾಮದ ನಿವಾಸಿಯೊಬ್ಬರು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಐಜಿಪಿ ವಿಪುಲ್ ಕುಮಾರ್, ಕೋವಿಡ್ ಸಂಕಷ್ಟದಿಂದ ಕಟ್ಟಡ ನಿರ್ಮಾಣ, ನೂತನ ಠಾಣೆ ಹಾಗೂ ಇನ್ನಿತರ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಸಮಾಜದ ಗಣ್ಯರು ಅಥವ ಸಂಘ ಸಂಸ್ಥೆಗಳ ಪ್ರ್ರಾಯೋಜಕತ್ವದೊಂದಿಗೆ ಮತ್ತು ಇಲಾಖೆಯ ಅನುದಾನಗಳನ್ನು ಬಳಸಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಬಹುದು. ಇಂದಿನ ಪರಿಸ್ಥಿತಿ ನೂತನ ಕಾರ್ಯಗಳಿಗೆ ಪೂರಕವಾಗಿಲ್ಲ ಎಂದು ಹೇಳಿದರು.
ಪಂಜರ್‍ಪೇಟೆ ನಿವಾಸಿಯೊಬ್ಬರು ಮಾತನಾಡಿ, ನಗರ ಠಾಣೆಯಲ್ಲಿ ನಾಲ್ಕು ಚಕ್ರದ ವಾಹನವೊಂದು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಘಟನಾ ಸ್ಥಳಕ್ಕೆ ತುರ್ತಾಗಿ ತೆರಳಲು ಸಾಧ್ಯವಾಗದ ಸ್ಥಿತಿಯಿದೆ. ಮತ್ತೊಂದು ವಾಹನ ಒದಗಿಸುವಂತೆ ಮನವಿ ಮಾಡಿದರು. ಪ್ರಶ್ನೆಗೆ ಉತ್ತರಿಸಿದ್ದ ವಿಪುಲ್ ಕುಮಾರ್, ರಾಜ್ಯ ಸರ್ಕಾರವು ಒಂದು ಠಾಣೆಗೆ ಒಂದು ನಾಲ್ಕು ಚಕ್ರದ ವಾಹನ ಮತ್ತು ಎರಡು ದ್ವಿ ಚಕ್ರ ವಾಹನವನ್ನು ನಿಗದಿಗೊಳಿಸಿದೆ. ಇದಿಗಾ ರಾಜ್ಯ ಸರ್ಕಾರವು ಒಂದು ದ್ವಿ ಚಕ್ರ ವಾಹನವನ್ನು ಹೆಚ್ಚುವರಿಯಾಗಿ ನೀಡಿದೆ ಎಂದು ಹೇಳಿದರು.
ಪೊಲೀಸ್ ಜನ ಸಂಪರ್ಕ ಸಭೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಕ್ಷಮಾ ಮಿಶ್ರ ಉಪಸ್ಥಿತರಿದ್ದರು.