ಎಲ್ಲಾ ತುರ್ತು ಸೇವೆಗಳಿಗೆ ಡಯಲ್ 112 ಸೇವೆ ಆರಂಭ : ಜಾಗೃತಿ ಜಾಥಾಕ್ಕೆ ಮಡಿಕೇರಿಯಲ್ಲಿ ಚಾಲನೆ

ಮಡಿಕೇರಿ ನ.23 : ಕೋವಿಡ್ ಜಾಗೃತಿ, ಮಾದಕ ವಸ್ತುವಿನ ವಿರುದ್ಧ ಯುದ್ಧ ಹಾಗೂ ಡಯಲ್ 112 ಕುರಿತು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವಾಹನ ಜಾಗೃತಿ ಜಾಥಾ ನಡೆಸಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಪೊಲೀಸ್ ವಾಹನ ಜಾಗೃತಿ ಜಾಥಾಕ್ಕೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ವಿಪುಲ್ ಕುಮಾರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ಪೊಲೀಸ್ ವಾಹನ ಜಾಗೃತಿ ಜಾಥಾ ಸಾರ್ವಜನಿಕರಲ್ಲಿ ಅರಿವು ಮೂಡಿಸಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಐಜಿಪಿ ವಿಪುಲ್ ಕುಮಾರ್ ಅವರು ಕೊಡಗು ಜಿಲ್ಲೆಯಲ್ಲಿ ಕೋವಿಡ್ ಕೇಸ್ಗಳ ಸಂಖ್ಯೆ ಕಡಿಮೆ ಇದೆಯಾದರೂ ಪ್ರತಿ ದಿನವೂ ಕೇಸ್ಗಳು ಪತ್ತೆಯಾಗುತ್ತಿವೆ. ಜಿಲ್ಲೆಯ ಜನರು, ಪೊಲೀಸ್ ಇಲಾಖೆ, ವಿವಿಧ ಸರಕಾರಿ ಇಲಾಖೆಗಳು ಕೋವಿಡ್ ವಿರುದ್ದದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯ ಜನರು ಶಿಸ್ತು ಬದ್ದವಾಗಿ ಕೋವಿಡ್ ವಿರುದ್ದ ಹೋರಾಡುತ್ತಿರುವುದು ಶ್ಲಾಘನೀಯ. ಕೊಡಗು ಜಿಲ್ಲೆಯ ಜನರ ಹೋರಾಟಕ್ಕೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.