ವಣಚಲು ಗ್ರಾಮಸ್ಥರ ಬದುಕು ಹಸನುಗೊಳಿಸಲು ವಿಶೇಷ ಕಾರ್ಯಕ್ರಮ : ಸೋಲಾರ್ ದೀಪ ಮತ್ತು ಜೇನು ಕೃಷಿ ಪೆಟ್ಟಿಗೆ ಯೋಜನೆಗೆ ಚಾಲನೆ

24/11/2020

ಮಡಿಕೇರಿ ನ.24 : 2018 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ತುತ್ತಾದ ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ನಬಾರ್ಡ್‍ನ ಅಂಗ ಸಂಸ್ಥೆಯಾದ ನ್ಯಾಪ್‍ಕಾನ್ಸ್ ವತಿಯಿಂದ ಸಿಎಸ್‍ಆರ್ ನಿಧಿಯಡಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್) ಅಂಗ ಸಂಸ್ಥೆಯಾದ ನಬಾರ್ಡ್ ಕನ್ಸಲ್ಟೆನ್ಸಿ ಸರ್ವೀಸಸ್(ನ್ಯಾಪ್‍ಕಾನ್ಸ್) ವತಿಯಿಂದ ಒಡಿಪಿ ಹಾಗೂ ಕೊಡಗು ಫಾರ್ ಟುಮಾರೊ ಸಹಯೋಗದಲ್ಲಿ ನಬಾರ್ಡ್‍ನ ನ್ಯಾಪ್‍ಕಾನ್ಸ್ ಸಿಎಸ್‍ಆರ್ ನಿಧಿಯಿಂದ ತಾಲ್ಲೂಕಿನ ವಣಚಲು ಗ್ರಾಮದಲ್ಲಿ ಸೋಲಾರ್ ವಿದ್ಯುತ್ ದೀಪ ಹಾಗೂ ಜೇನು ಕೃಷಿ ಪೆಟ್ಟಿಗೆಯನ್ನು ಜಿ.ಪಂ.ಸಿಇಒ ಅವರು ಮಂಗಳವಾರ ಸಾಂಕೇತಿಕವಾಗಿ ವಿತರಿಸಿದರು.

ವಣಚಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಲಾರ್ ವಿದ್ಯುತ್ ದೀಪ ಮತ್ತು ಜೇನು ಪೆಟ್ಟಿಗೆ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 12.65 ಲಕ್ಷ ರೂ. ಸಹಾಯಧನ ಕಾರ್ಯಕ್ರಮವನ್ನು ಸೋಲಾರ್ ವಿದ್ಯುತ್ ದೀಪ ಹಾಗೂ ಜೇನು ಕೃಷಿ ಪೆಟ್ಟಿಗೆ ವಿತರಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ನಬಾರ್ಡ್‍ನ ಜಿಲ್ಲಾ ಅಭಿವೃದ್ಧಿ ನಿವೃತ್ತ ವ್ಯವಸ್ಥಾಪಕರಾದ ಮುಂಡಂಡ ಸಿ.ನಾಣಯ್ಯ ಅವರು ಮಾತನಾಡಿ ಪ್ರಕೃತಿ ವಿಕೋಪದಿಂದ ತುಂಬಾ ತೊಂದರೆಗೆ ತುತ್ತಾದ ಗ್ರಾಮೀಣ ಜನರಿಗೆ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಸಹ ಕೈಜೋಡಿಸುತ್ತಿದ್ದು, ಇವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುವಂತಾಗಬೇಕು ಎಂದು ತಿಳಿಸಿದರು.

ಈ ಯೋಜನೆಯು ದೇಶದ ಆರು ರಾಜ್ಯಗಳಿಗೆ ಮಾತ್ರ ದೊರೆತ್ತಿದ್ದು, ಇದರಲ್ಲಿ ರಾಜ್ಯದ ಕೊಡಗು ಜಿಲ್ಲೆಯಲ್ಲಿಯೂ ಅನುಷ್ಠಾನಗೊಳಿಸಿರುವುದು ವಿಶೇಷವಾಗಿದೆ ಎಂದು ಹೇಳಿದರು.

ನಬಾರ್ಡ್‍ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ಪಿ.ಬಿ.ಶ್ರೀನಿವಾಸ್ ಅವರು ಮಾತನಾಡಿ ನಬಾರ್ಡ್ ಅಂಗ ಸಂಸ್ಥೆಯಾದ ನ್ಯಾಪ್‍ಕಾನ್ಸ್ ವತಿಯಿಂದ ವಣಚಲು ಗ್ರಾಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸೋಲಾರ್ ವಿದ್ಯುತ್ ದೀಪ ಹಾಗೂ ಜೇನು ಕೃಷಿ ಪೆಟ್ಟಿಗೆ ವಿತರಣೆಯನ್ನು ಆರು ತಿಂಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಮೈಸೂರು ಒಡಿಪಿ ಸಂಸ್ಥೆಯ ನಿರ್ದೇಶಕರಾದ ಗುರು ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕಿ ಮೌಲಿ, ಕೊಡಗು ಫಾರ್ ಟುಮಾರೊ ಸಂಸ್ಥೆಯ ವಿಕ್ರಮ್ ಉತ್ತಪ್ಪ, ಒಡಿಪಿ ಸಂಸ್ಥೆಯ ಜಾಯ್ಸ್ ಮೆನೇಜಸ್, ಕೊಡಗು ಫಾರ್ ಟುಮಾರೊ ನಿರ್ದೇಶಕರಾದ ಕಾವೇರಪ್ಪ, ಮೈಸೂರು ಒಡಿಪಿ ಸಂಸ್ಥೆಯ ಮಹಿಳಾಭಿವೃದ್ಧಿ ಯೋಜನಾ ಸಂಯೋಜಕ ಮೋಲಿ ಪುಡ್ತಾದೊ ಮತ್ತಿತರರು ಹಾಜರಿದ್ದರು.