ಹಸಿ ಕಸದಿಂದ ಗೊಬ್ಬರ ತಯಾರಿಕೆ : ಮಡಿಕೇರಿ ನಗರಸಭೆಯಿಂದ ಕಾರ್ಯಾಗಾರ

24/11/2020

ಮಡಿಕೇರಿ ನ.24 : ಹಸಿ ಕಸದಿಂದ ಗೊಬ್ಬರ ತಯಾರಿಸುವ ವಿಧಾನ ಬಗ್ಗೆ ನಗರದ ವಿವಿಧ ಹೋಟೆಲ್, ರೆಸ್ಟೊರೆಂಟ್ ಹಾಗೂ ಹೋಂ ಸ್ಟೇಗಳ ಪ್ರತಿನಿಧಿಗಳೊಂದಿಗೆ ಕಾರ್ಯಾಗಾರವು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯಿತು.
ನಗರಸಭೆ ವತಿಯಿಂದ ನಡೆದ ಕಾರ್ಯಗಾರದಲ್ಲಿ ಘನ ತ್ಯಾಜ್ಯ ವಿಲೇವಾರಿ ಮತ್ತು ಸಮರ್ಪಕ ನಿರ್ವಹಣೆ ಸಂಬಂಧ ನಡೆದ ಕಾರ್ಯಗಾರದಲ್ಲಿ ವಿವಿಧ ಹೋಟೆಲ್‍ಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ಮಾತನಾಡಿ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಮತ್ತಿತರ ಕಡೆಗಳಲ್ಲಿ ಪ್ರತಿನಿತ್ಯ ಹಸಿ ತ್ಯಾಜ್ಯವನ್ನು ಬೇರ್ಪಡಿಸಿ, ಅದರಿಂದ ಗೊಬ್ಬರ ಮಾಡಬಹುದಾಗಿದ್ದು, ಆ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ ಎಂದು ಕೋರಿದರು.
ಹಸಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಒಂದೆಡೆ ಸೇರಿಸಿ, ಅದರಿಂದ ಗೊಬ್ಬರ ತಯಾರಿಸಬಹುದಾಗಿದೆ. ಇದರಿಂದ ಕೈತೋಟ, ಜಮೀನುಗಳಲ್ಲಿ ಬಳಸಬಹುದಾಗಿದೆ. ಆದ್ದರಿಂದ ಹಸಿ ಕಸವನ್ನು ಸಂಗ್ರಹಿಸಿ ಗೊಬ್ಬರವನ್ನಾಗಿ ಮಾಡಬೇಕು ಎಂದು ಪೌರಾಯುಕ್ತರು ಸಲಹೆ ಮಾಡಿದರು.
ಗ್ರೀನ್ ರೀಚ್ ಗ್ರೋ ಇಂಡಿಯಾ ಸಂಸ್ಥೆಯ ಪ್ರಾಂತೀಯ ಅಧಿಕಾರಿ ಸುರೇಶ್ ಜಿ. ನಾಯರ್ ಅವರು ಮಾಹಿತಿ ನೀಡಿ ತರಕಾರಿ ಸಿಪ್ಪೆಗಳು, ಬೇಯಿಸಿದ ಆಹಾರ, ಹಣ್ಣಿನ ಬೀಜ, ಮೊಟ್ಟೆ ಚಿಪ್ಪು, ಮಾಂಸಹಾರಿ ಆಹಾರ, ಹೂವು, ಹಣ್ಣು, ಚಹ ಚೀಲಗಳು, ತ್ಯಾಜ್ಯ, ಎಲೆ ಫಲಕ, ಉದ್ಯಾನ ತ್ಯಾಜ್ಯ, ಬಿದ್ದ ಎಲೆಗಳಿಂದ ಗೊಬ್ಬರ ತಯಾರಿಸಬಹುದಾಗಿದೆ. ಪ್ರತೀ ಮನೆಯಲ್ಲು ಆರ್ಗನಿಕ್ ಕಾಂಪೋಸ್ಟರ್ ಡಬ್ಬಿಯನ್ನು ಬಳಸಿ ಹಸಿಕಸದಿಂದ ಗೊಬ್ಬರ ಮಾಡಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಆಹಾರ ತ್ಯಾಜ್ಯದ ಮೇಲೆ ಏಳು ದಿನಗಳಿಗೊಮ್ಮೆ ಗ್ರೀನ್ ರಿಚ್ ಸಾವಯವ ಆಕ್ಟಿವೇಟರ್‍ನ್ನು ಸಿಂಪಡಿಸಿ ಆಕ್ಟಿವೇಟರ್ ಮಿಶ್ರಗೊಬ್ಬರ ಪ್ರಕ್ರಿಯೆ ಹೆಚ್ಚಿಸಬಹುದಾಗಿದೆ. ಇದು ಮ್ಯಾಗ್ನೋಸ್ ಮತ್ತು ನೊಣಗಳನ್ನು ನಿಯಂತ್ರಿಸುತ್ತದೆ. ಕೆಟ್ಟ ವಾಸನೆಯನ್ನು ತಡೆಯುತ್ತದೆ ಎಂದು ಅವರು ಹೇಳಿದರು.
ಯಾವುದೇ ಕಾರಣಕ್ಕೂ ಸ್ಯಾನಿಟರಿ ನ್ಯಾಪ್‍ಕಿನ್, ಬ್ಯಾಂಡೇಜ್, ರಕ್ತದಿಂದ ಕಲುಷಿತಗೊಂಡ ಯಾವುದೇ ವಸ್ತು, ಗ್ಲಾಸ್, ತಂತಿ, ಬಟ್ಟೆ, ಟ್ಯಾಬ್ಲೆಟ್ ರಬ್ಬರ್, ಥರ್ಮೋಕೋಲ್, ಪ್ಲಾಸ್ಟಿಕ್, ಲೋಹ, ಕಾಗದ ಇವುಗಳನ್ನು ಬಳಸಬಾರದು. ಟ್ಯೂಬ್‍ಲೈಟ್, ಬಲ್ಬ್, ಬ್ಯಾಟರಿ, ಎಲೆಕ್ಟ್ರಿಕ್ ತ್ಯಾಜ್ಯ, ಬಣ್ಣ, ಇವುಗಳು ಅಪಾಯಕಾರಿ ತ್ಯಾಜ್ಯಗಳ ಗುಂಪಿಗೆ ಬರುತ್ತವೆ ಎಂದು ಅವರು ಮಾಹಿತಿ ನೀಡಿದರು.
ಪರಿಸರ ಎಂಜಿನಿಯರ್ ರೀತುಸಿಂಗ್ ಅವರು ಘನತ್ಯಾಜ್ಯ ವಿಲೇವಾರಿ ಬಗ್ಗೆ ಮಾಹಿತಿ ನೀಡಿದರು. ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ. ಆ ನಿಟ್ಟಿನಲ್ಲಿ ಹಸಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಹಸಿ ಕಸದಿಂದ ಉತ್ತಮ ಗೊಬ್ಬರ ತಯಾರಿಸಬಹುದಾಗಿದೆ ಎಂದು ಅವರು ಹೇಳಿದರು. ನಗರದ ವಿವಿಧ ಹೋಟೆಲ್, ರೇಸಾರ್ಟ್ ಮತ್ತು ಹೋಂಸ್ಟೇ ಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.