ಅಂತರರಾಷ್ಟ್ರೀಯ ದತ್ತು ಮಾಸಾಚರಣೆ : ಆನ್‍ಲೈನ್ ಮೂಲಕ “ಮಡಿಲು ಬೆಳಗು”-ದತ್ತು ಕಾರ್ಯಕ್ರಮ

24/11/2020

ಮಡಿಕೇರಿ ನ.24 : ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಅಂತರರಾಷ್ಟ್ರೀಯ ದತ್ತು ಮಾಸಾಚರಣೆ ನ. -2020” ರ ಅಂಗವಾಗಿ ಅರಿವು ಮೂಡಿಸಲು ಸಾರ್ವಜನಿಕರಿಗಾಗಿ ಆನ್‍ಲೈನ್ ಮೂಲಕ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ.
ಸ್ಪರ್ಧೆಗಳಲ್ಲಿ ಭಾಗವಹಿಸಲು ನವೆಂಬರ್, 30 ರವರೆಗೆ ಅವಧಿ ವಿಸ್ತರಿಸಲಾಗಿದೆ. ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕು. ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣವು ಕಲ್ಪಿಸುತ್ತದೆ. ಈ ನಿಟ್ಟಿನಲ್ಲಿ ದತ್ತು ಪ್ರಕ್ರಿಯೆಯು ಅನಾಥ, ಪರಿತ್ಯಕ್ತ ಹಾಗೂ ಒಪ್ಪಿಸಲ್ಪಟ್ಟ ಮಕ್ಕಳ ಪುನರ್ವಸತಿಗೆ ನೆರವಾಗುವುದು ಮಕ್ಕಳ ರಕ್ಷಣಾ ಯೋಜನೆಯ ಉದ್ದೇಶವಾಗಿದೆ. ಆದ್ದರಿಂದ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ 2020ನೇ ವರ್ಷದ ನವೆಂಬರ್ ತಿಂಗಳನ್ನು ಅಂತರರಾಷ್ಟ್ರೀಯ ದತ್ತು ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಈ ಪ್ರಯುಕ್ತ ದತ್ತು ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ದತ್ತು ಪಡೆದ ಮಗುವಿನ ಸುರಕ್ಷಾ ಆರೈಕೆ, ಮಕ್ಕಳನ್ನು ದತ್ತು ಪಡೆಯುವುದು ಪೋಷಕರಿಗೆ ಹಾಗೂ ಮಕ್ಕಳಿಗೆ ಹೇಗೆ ಸಂತೋಷದಾಯಕವಾಗಿದೆ ಮತ್ತು ಪೋಷಕತ್ವ ಈ ವಿಷಯಗಳ ಕುರಿತು ಪೋಸ್ಟರ್, ಕಿರುಚಿತ್ರ (ಶಾರ್ಟ್ ಫಿಲಂ 2 ನಿಮಿಷ ಮೀರಬಾರದು) ಡ್ಯಾನ್ಸ್ (2 ನಿಮಿಷ ಮೀರಬಾರದು) ಹಾಗೂ ಪದ್ಯ ರಚಿಸುವ ಆನ್‍ಲೈನ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ತಾವು ಸಿದ್ದಪಡಿಸಿದ ಪೋಸ್ಟರ್, ಕಿರುಚಿತ್ರ ಡ್ಯಾನ್ಸ್ ಹಾಗೂ ಪದ್ಯ ರಚನೆಗಳ ಪ್ರತಿಯನ್ನು dcp.adoptionmonth2020@gmail.com ಇ-ಮೇಲ್ ವಿಳಾಸಕ್ಕೆ ಸಲ್ಲಿಸಲು ನವೆಂಬರ್, 30 ರ ಸಂಜೆ 5.30 ರವರೆಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ icps.karnataka.gov.in ವೆಬ್‍ಸೈಟ್‍ನ ಇತ್ತೀಚಿನ ಸುದ್ದಿಗಳಲ್ಲಿ ವೀಕ್ಷಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರವೀಂದ್ರ ಅವರು ತಿಳಿಸಿದ್ದಾರೆ.