ಭಾಗಮಂಡಲ ಸಹಕಾರ ಸಂಘಕ್ಕೆ 18.79 ಲಕ್ಷ ಲಾಭ : ಶೈಕ್ಷಣಿಕ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನ

24/11/2020

ಮಡಿಕೇರಿ ನ. 24 : ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ 2019-20ನೇ ಸಾಲಿನಲ್ಲಿ 18.79 ಲಕ್ಷ ಲಾಭವನ್ನುಗಳಿಸುವ ಮೂಲಕ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿರುವುದಾಗಿ ಸಂಘದ ಅಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್ ತಿಳಿಸಿದರು.

ಸ್ಥಳೀಯ ಗೌಡ ಸಮಾಜದಲ್ಲಿ ಆಯೋಜಿತ ಸಂಗದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು 3932 ಸದಸ್ಯರನ್ನು ಹೊಂದಿದ್ದು, 100 ಲಕ್ಷ ರೂ. ಪಾಲು ಬಂಡವಾಳ, 1171.13 ಲಕ್ಷ ಠೇವಣಿಯನ್ನು ಹೊಂದಿದೆ. 1806.29 ಲಕ್ಷ ದುಡಿಯುವ ಬಂಡವಾಳ ಇರುವುದಾಗಿ ಮಾಹಿತಿಯನ್ನಿತ್ತರು.

ಸಹಕಾರ ಸಂಘದಿಂದ 1754 ಸದಸ್ಯರಿಗೆ 1497.28 ಲಕ್ಷ ರೂ. ವಿವಿಧ ಸಾಲಗಳನ್ನು ನೀಡಲಾಗಿದೆ. ಈ ಪೈಕಿ 467 ರೈತÀರಿಗೆ 525.43 ಲಕ್ಷ ಕೃಷಿ ಸಾಲ ನೀಡಲಾಗಿದೆಯೆಂದು ತಿಳಿಸಿದ ಸತೀಶ್ ಕುಮಾರ್, ಸಂಘದ ಸದಸ್ಯರು ತಾವು ಪಡೆದಿರುವ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕಾಗಿ ಮನವಿ ಮಾಡಿದರು.

ಸಂಘವು ಕೃಷಿ ಪರಿಕರ ಜೊತೆಗೆ ವಿವಿಧ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 1108 ಟನ್ ರಸ ಗೊಬ್ಬರ ಮಾರಾಟ ಮಾಡುವ ಮೂಲಕ ಒಟ್ಟು 174.46 ಲಕ್ಷ ವ್ಯಾಪಾರ ವಹಿವಾಟು ನಡೆಸಿರುವುದಾಗಿ ಮಾಹಿತಿಯನ್ನಿತ್ತರು.

ಸಂಘದಲ್ಲಿ ಮರಣ ನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಸಂಘದಲ್ಲಿ ಲಾಕರ್ ವ್ಯವಸ್ಥೆ ಮಾಡಲಾಗಿದ್ದು ಗ್ರಾಹಕರು ಇದರ ಪ್ರಯೋಜನಾ ಪಡೆದುಕೊಳ್ಳುವಂತೆ ಕೋರಿದರು.

ಸನ್ಮಾನ – ಸಂಘದ ಸದಸ್ಯರಾದ ಎ.ಕೆ. ಅಪ್ಪಣ್ಣ ಮತ್ತು ಎ.ಎ. ಮಾಯಮ್ಮ ದಂಪತಿಯ ಪುತ್ರ ಎ.ಎ.ಲಿಶಾನ್ ಅವರು 2019-20 ಸಾಲಿನಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 592 ಅಂಕ(ಶೇ.98.66)ಗಳಿಸಿ, ಕಾಲೇಜಿಗೆ ಪ್ರಥಮ ಸ್ಥಾನ ಮತ್ತು ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದುಕೊಂಡಿದ್ದು, ಇವರ ಈ ಸಾಧನೆಯನ್ನು ಪರಿಗಣಿಸಿ ಸಂಘದ ವತಿಯಿಂದ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಇದೇ ಸಂದರ್ಭ ಎಸ್‍ಎಸ್‍ಎಲ್‍ಸಿ, ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಜೆ. ಎಸ್. ನಂಜುಂಡಪ್ಪನವರು ಸರ್ವರನ್ನು ವಂದಿಸಿದರು.