ಮೊದಲು ಮನೆ ನೀಡಿ, ಆಮೇಲೆ ಚುನಾವಣೆ ಎದುರಿಸಿ : ಕೊಡಗು ಜೆಡಿಎಸ್ ಒತ್ತಾಯ

November 24, 2020

ಮಡಿಕೇರಿ ನ.24 : ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಆಡಳಿತ ಪಕ್ಷದ ಶಾಸಕರು ಹಾಗೂ ಚುನಾಯಿತ ಪ್ರತಿನಿಧಿಗಳು ರಾಜಕೀಯ ಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ. ಚುನಾವಣಾ ಕಣಕ್ಕೆ ತಯಾರಿ ನಡೆಸುವುದಕ್ಕೂ ಮೊದಲು ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಬಡ ಜನತೆಗೆ ಮನೆಗಳನ್ನು ನಿರ್ಮಿಸಿಕೊಡುವ ಕಾರ್ಯಕ್ಕೆ ಚಾಲನೆ ನೀಡಲಿ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರತೀ ಚುನಾವಣೆಯ ಸಂದರ್ಭವೂ ವಸತಿ ಯೋಜನೆಯ ಹುಸಿ ಭರವಸೆ ನೀಡಿ ಗ್ರಾಮೀಣ ಜನರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮಳೆಹಾನಿ ಸಂತ್ರಸ್ತರು ಅನೇಕರು ಇಂದಿಗೂ ಸರ್ಕಾರದ ಮನೆ ಸಿಗದೆ ಅತಂತ್ರ ಸ್ಥಿತಿಯಲ್ಲಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಪ್ರಾಕೃತಿಕ ವಿಕೋಪದಿಂದ ಗ್ರಾಮೀಣ ಕೃಷಿಕರ ಬದುಕು ನರಕವಾಗಿದ್ದು, ಬೆಳೆ ಬೆಳೆಯಲಾಗದ ಪರಿಸ್ಥಿತಿ ಮುಂದುವರೆದಿದೆ. ಆದರೆ ಸೂಕ್ತ ಪರಿಹಾರವನ್ನು ಸರ್ಕಾರದಿಂದ ಬಿಡುಗಡೆಗೊಳಿಸುವ ಕಾರ್ಯವನ್ನು ಚುನಾಯಿತರು ಮಾಡಿಲ್ಲ. ಈಗ ಮತ್ತೆ ಗ್ರಾ.ಪಂ ಚುನಾವಣೆ ಸಮೀಪಿಸಿದ್ದು, ಭರವಸೆಗಳ ಮಹಾಪೂರ ಹರಿದು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಗ್ರಾಮೀಣ ಮತದಾರರು ಯಾವುದೇ ಹುಸಿ ಭರವಸೆಗಳಿಗೆ ಮಣಿಯುವುದಿಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿರುವ ಗಣೇಶ್, ಕಡು ಬಡವರು, ಕಾರ್ಮಿಕರು ಹಾಗೂ ಮಳೆಹಾನಿ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡುವಂತೆ ಒತ್ತಾಯಿಸಿ ಜೆಡಿಎಸ್ ವತಿಯಿಂದ ಹೋರಾಟವನ್ನು ರೂಪಿಸುವುದಾಗಿ ತಿಳಿಸಿದ್ದಾರೆ. ಇಲ್ಲಿಯವರೆಗೆ ಗ್ರಾಮಗಳ ಅಭಿವೃದ್ಧಿಯ ಬಗ್ಗೆ ಯಾವುದೇ ಕಾಳಜಿ ತೋರದ ಶಾಸಕರುಗಳು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರಣಿ ಶಂಕು ಸ್ಥಾಪನೆಯಲ್ಲಿ ತೊಡಗಿದ್ದಾರೆ ಎಂದು ಗಣೇಶ್ ಟೀಕಿಸಿದ್ದಾರೆ.
ಇನ್ನು ಮುಂದೆ ಜಿಲ್ಲೆಯಲ್ಲಿ ಈ ರೀತಿಯ ನಾಟಕಗಳು ನಡೆಯುವುದಿಲ್ಲ ಮತ್ತು ಗ್ರಾಮಸ್ಥರು ಇದಕ್ಕೆ ಅವಕಾಶವನ್ನೂ ನೀಡುವುದಿಲ್ಲ. ಪ್ರಜ್ಞಾವಂತ ಮತದಾರರು ಹುಸಿ ಭರವೆಸಗಳ ನಾಯಕರಿಗೆ ಈ ಬಾರಿ ಸರಿಯಾದ ಪಾಠವನ್ನೇ ಕಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

error: Content is protected !!