ಬಂದ್ಗೆ ಅವಕಾಶ ನೀಡುವುದಿಲ್ಲ : ಸೋಮವಾರಪೇಟೆ ಬಿಜೆಪಿ ಎಚ್ಚರಿಕೆ
November 24, 2020

ಮಡಿಕೇರಿ ನ.24 : ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಬಂದ್ ಎನ್ನುವ ನಾಟಕವಾಡುತ್ತಿರುವ ವಾಟಾಳ್ ನಾಗರಾಜ್ ಮತ್ತು ಕಂಪನಿಗೆ ಕೊಡಗು ಬಂದ್ ಮಾಡಲು ಅವಕಾಶ ಕಲ್ಪಿಸುವುದಿಲ್ಲ ಎಂದು ಬಿಜೆಪಿಯ ಸೋಮವಾರಪೇಟೆ ತಾಲೂಕು ವಕ್ತಾರ ಕೆ.ಜಿ.ಮನು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕನ್ನಡದ ರಕ್ಷಣೆಯ ನಾಟಕವಾಡುವ ಈ ಕಂಪನಿಗಳಿಗೆ ಅಕ್ರಮ ವಲಸಿಗರು, ಪಾಕಿಸ್ತಾನಿಗಳು, ಉಗ್ರರು ರಾಜ್ಯಕ್ಕೆ ನುಸುಳುವ ಸಂದರ್ಭ ದನಿ ಎತ್ತುವ ಗುಂಡಿಗೆ ತೋರುವುದಿಲ್ಲ. ಇದೀಗ ಅನಾವಶ್ಯಕ ಮರಾಠಿಗರ ಹೆಸರಿನಲ್ಲಿ ಕರ್ನಾಟಕ ಬಂದ್ ಮಾಡಲು ಹೊರಟಿರುವುದು ಸರಿಯಲ್ಲ ಎಂದಿದ್ದಾರೆ.
ಕರ್ನಾಟಕದಲ್ಲಿರುವ ಮರಾಠಿಗರಿಗೆ ಪ್ರಾಧಿಕಾರ ನಿರ್ಮಾಣವಾಗಿದೆಯೇ ಹೊರತು ಮಹಾರಾಷ್ಟ್ರ ರಾಜ್ಯಕ್ಕಲ್ಲ. ಅನಾವಶ್ಯಕ ಬಂದ್ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುವ ಇಂತಹ ಬಂದ್ಗಳು ಕೊಡಗಿನಲ್ಲಿ ನಡೆಯಲು ಜನತೆ ಬಿಡುವುದಿಲ್ಲ. ಯಾವುದೇ ರೀತಿಯ ಬೆಂಬಲವೂ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.