ಸಮುದ್ರದಲ್ಲಿ ಸಿಲುಕಿಕೊಂಡ 30 ದೋಣಿಗಳು

25/11/2020

ಪುದುಚೇರಿ ನ.25 : ತಮಿಳುನಾಡು, ಆಂಧ್ರಪ್ರದೇಶ ಹಾಗೂ ಪುದುಚೇರಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಸಂಕಷ್ಟ ನಿವಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡು ಮತ್ತು ಪುದುಚೇರಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದು, ಸಂಪೂರ್ಣ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಈ ಮಧ್ಯೆ ಮೀನುಗಾರಿಕೆಗೆ ತೆರಳಿದ್ದ ಒಟ್ಟು 83 ದೋಣಿಗಳ ಪೈಕಿ ಕಾರೈಕಲ್‍ನ ಮೀನುಗಾರರಿರುವ 30 ದೋಣಿಗಳು ಸಮುದ್ರದಲ್ಲಿ ಸಿಲುಕಿಕೊಂಡಿವೆ.
ಮೀನುಗಾರರು ಸಿಲುಕಿರುವ ಬಗ್ಗೆ ಕೋಸ್ಟ್‍ಗಾರ್ಡ್‍ಗೆ ಮಾಹಿತಿ ನೀಡಲಾಗಿದ್ದು, ಅವರನ್ನು ಸುರಕ್ಷಿತವಾಗಿ ಕರೆತರಲು ಶೋಧ ನಡೆಸಲಾಗುತ್ತಿದೆ ಎಂದು ಕಂದಾಯ ಸಚಿವ ಎಂಒಹೆಚ್‍ಎಫ್ ಶಜಹಾನ್ ಅವರು ತಿಳಿಸಿದ್ದಾರೆ.
ಉಳಿದ 53 ದೋಣಿಗಳನ್ನು ಸುರಕ್ಷಿತವಾಗಿ ತರಲಾಗಿದ್ದು, ಕೋಝಿಕೋಡ್‍ನಲ್ಲಿ 48 ಮತ್ತು ಆಂಧ್ರಪ್ರದೇಶದಲ್ಲಿ ಐದು ದೋಣಿಗಳಿವೆ.
ದುರ್ಬಲ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆಶ್ರಯ ಕಲ್ಪಿಸಲು ಪುದುಚೇರಿ ಸರ್ಕಾರ ಪುದುಚೇರಿ ಪ್ರದೇಶದಲ್ಲಿ 196 ಮತ್ತು ಕಾರೈಕಲ್ ಪ್ರದೇಶದಲ್ಲಿ 50 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿದೆ. ಪುದುಚೇರಿಯಲ್ಲಿ 16 ಕರಾವಳಿ ಪ್ರದೇಶಗಳನ್ನು ದುರ್ಬಲ ಪ್ರದೇಶಗಳಾಗಿ ಗುರುತಿಸಲಾಗಿದೆ.