ಡಿ.13ರಂದು ಕುಟ್ಟಂದಿಯಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

25/11/2020

ಪೊನ್ನಂಪೇಟೆ, ನ.25 : ಬಿಟ್ಟಂಗಾಲ ಸಮೀಪದ ಕಂಡಂಗಾಲದ ಪ್ರಗತಿ ಸ್ವಸಹಾಯ ಸಂಘದ ವತಿಯಿಂದ ಹುತ್ತರಿ ಹಬ್ಬದ ಪ್ರಯುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಪ್ರಥಮ ವರ್ಷದ ಮುಕ್ತ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘದ ಪ್ರಮುಖ ಅಪ್ಪಂಡೇರಂಡ ದಿನು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳು (ಡಿಸೆಂಬರ್)13ರಂದು ಭಾನುವಾರ ಆಯೋಜಿಸಲಾಗಿರುವ ಈ ಸ್ಪರ್ಧೆಯು ಬಿ.ಶೆಟ್ಟಿಗೇರಿ ರಸ್ತೆಯಲ್ಲಿರುವ ಕುಟ್ಟಂದಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ. ಈ ಶೂಟಿಂಗ್ ಸ್ಪರ್ಧೆಯು 0.22 ರೈಫಲ್ ಮತ್ತು 12ನೇ ಬೋರ್ ಕೋವಿ ವಿಭಾಗಗಳಲ್ಲಿ ಪ್ರತ್ಯೇಕವಾಗಿ ನಡೆಯಲಿದ್ದು, ಈ ಎರಡು ವಿಧದ ಬಂದೂಕಿನಿಂದ ಮಾತ್ರ ಸ್ಪರ್ಧೆಯಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಅಂದು ಬೆಳಿಗ್ಗೆ 9ಗಂಟೆಗೆ ಸ್ಪರ್ಧೆ ಆರಂಭಗೊಳ್ಳಲಿದೆ. ಬೆಳಗ್ಗೆಯಿಂದಲೇ ಸ್ಪರ್ಧೆಯ ನೋಂದಣಿ ಕೂಡ ಪ್ರಾರಂಭವಾಗಲಿದೆ. ಸ್ಪರ್ಧೆಯಲ್ಲಿ ವಿಜೇತರಾಗುವ ಎರಡೂ ವಿಭಾಗದ ಸ್ಪರ್ಧಿಗಳಿಗೆ ತಲಾ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನದ ಆಕರ್ಷಕ ನಗದು ಬಹುಮಾನ ಮತ್ತು ಪಾರಿತೋಷಕ ನೀಡಿ ಗೌರವಿಸಲಾಗುವುದು. ಅಲ್ಲದೆ ಅಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ಮತ್ತು ಪ್ರೇಕ್ಷಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಆಸಕ್ತರು ಯಾವುದೇ ಲಿಂಗಬೇದವಿಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಆದರೆ ಸ್ಪರ್ಧಿಗಳಿಗೆ ವಯೋಮಿತಿಯ ನಿರ್ಬಂಧವಿದ್ದು, 12 ವರ್ಷ ಪ್ರಾಯದ ಮೇಲ್ಪಟ್ಟವರು ಮಾತ್ರ ಈ ಸ್ಪರ್ಧೆಯಲ್ಲಿ ಮುಕ್ತವಾಗಿ ಪಾಲ್ಗೊಳ್ಳಬಹುದಾಗಿದೆ.
ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ 9148978919, 9740632495, 9731289423 ಅನ್ನು ಸಂಪರ್ಕಿಸಬಹುದಾಗಿದೆ ಎಂದು ದಿನು ಅವರು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪ್ರಗತಿ ಸ್ವಸಹಾಯ ಸಂಘದ ಪ್ರಮುಖರಾದ ಎ.ಬಿ.ಮೋಹನ್ ಅವರು ಮಾತನಾಡಿ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಕೊಡಗಿನ ಪುರಾತನ ಗ್ರಾಮೀಣ ಕ್ರೀಡೆಯಾಗಿದೆ. ಮಾಹಿತಿ ತಂತ್ರಜ್ಞಾನಗಳ ಆವಿಷ್ಕಾರದೊಂದಿಗೆ ಆಧುನಿಕ ಕ್ರೀಡೆಗಳು ಹೆಚ್ಚಾದ ಈ ಕಾಲಘಟ್ಟದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಪ್ರಾಶಸ್ತ್ಯ ಇಲ್ಲದಾಗಿದೆ. ಕೊಡಗಿನಲ್ಲಿ ಗ್ರಾಮೀಣ ಕ್ರೀಡಾ ಕೂಟಗಳನ್ನು ನಿರಂತರವಾಗಿ ಆಯೋಜಿಸುವುದರ ಮೂಲಕ ಪುರಾತನ ಕ್ರೀಡೆಯ ಪುನಶ್ಚೇತನ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಂಘದ ಮತ್ತೋರ್ವ ಪ್ರಮುಖರಾದ ನಂಬುಡುಮಾಡ ಪವಿ ಪೂವಯ್ಯ ಅವರು ಗೋಷ್ಠಿಯಲ್ಲಿ ಮಾತನಾಡಿ, ಕೊಡಗಿನಲ್ಲಿ ಈ ಹಿಂದೆ ಜನಾಕರ್ಷಣೆಯಾಗಿದ್ದ ಬಹಳಷ್ಟು ಗ್ರಾಮೀಣ ಕ್ರೀಡೆಗಳು ಇಂದು ಜನರಿಂದ ದೂರವಾಗುತ್ತಿದೆ. ಇದನ್ನು ಮನಗಂಡ ಕಂಡಂಗಾಲದ ಪ್ರಗತಿ ಸ್ವಸಹಾಯ ಸಂಘದ ಪದಾಧಿಕಾರಿಗಳ ತಂಡ, ತೆಂಗಿನಕಾಯಿಗೆ ಗುಂಡು ಹೊಡೆಯುವ ಈ ಸ್ಪರ್ಧೆಯನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಲು ಮುಂದಾಗಿದೆ. ಈ ಸಂಸ್ಥೆ ವತಿಯಿಂದ ಮುಂದೆಯೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಸೇರಿದಂತೆ ಗ್ರಾಮೀಣ ಕ್ರೀಡೆಗಳನ್ನು ನಿರಂತರವಾಗಿ ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಅಪ್ಪಂಡೇರಂಡ ಎನ್. ಪೆಮ್ಮಯ್ಯ, ಚಂದೂರ ಪ್ರಭು, ಅಪ್ಪಂಡೇರಂಡ ಸತಿ, ನಂಬುಡುಮಾಡ ಲವ, ಮುಲ್ಲೆಂಗಡ ಜೀವನ್ ಮತ್ತು ಚಂದೂರ ಸುರೇಶ್ ಅವರು ಉಪಸ್ಥಿತರಿದ್ದರು.