ಕೊಡವ ಸಮಾಜಕ್ಕೆ ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿಯನ್ನು ವರ್ಗಾಯಿಸಿ : ಮಾಜಿ ಸಚಿವ ಎಂ.ಸಿ.ನಾಣಯ್ಯ ಒತ್ತಾಯ

25/11/2020

ಮಡಿಕೇರಿ ನ.25 : ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿಗೆ ಮತ್ತಷ್ಟು ಹಣ ವ್ಯಯ ಮಾಡುವುದನ್ನು ತಕ್ಷಣವೇ ನಿಲ್ಲಿಸಿ ಆ ಕಾಮಗಾರಿಗೆ ಬಳಸಲಾಗುವ ಎಲ್ಲಾ ಹಣವನ್ನು ವಿರಾಜಪೇಟೆ ತಾಲ್ಲೂಕಿನ ಬಾಳುಗೋಡುವಿನಲ್ಲಿರುವ “ಫೆಡರೇಷನ್ ಆಫ್ ಕೊಡವ ಸಮಾಜ”ಕ್ಕೆ ವರ್ಗಾಯಿಸಬೇಕು. “ಮಡಿಕೇರಿ ಕೊಡವ ಸಮಾಜ”ಕ್ಕೆ ಕಾಮಗಾರಿಯ ಮೇಲ್ವಿಚಾರಣೆ ಒಪ್ಪಿಸಬೇಕು ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಒತ್ತಾಯಿಸಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಅವರು ತಕ್ಷಣ ಹೆರಿಟೇಜ್ ಸೆಂಟರ್ ಕಾಮಗಾರಿಯನ್ನು ನಿಲ್ಲಿಸಬೇಕು. ಸರಕಾರ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಪುನರ್ ವಿಮರ್ಶೆ ಮಾಡಬೇಕು. ಈ ಯೋಜನೆಗೆ ಮೀಸಲಿಟ್ಟ ಹಣವನ್ನು ಬಾಳುಗೋಡಿನಲ್ಲಿರುವ ಫೆಡರೇಷನ್ ಆಫ್ ಕೊಡವ ಸಮಾಜಕ್ಕೆ ನೀಡಬೇಕು. 31 ಕೊಡವ ಸಮಾಜಗಳು ಬಾಳುಗೋಡು ಕೊಡವ ಸಮಾಜದ ಸದಸ್ಯರಾಗಿದ್ದು, ಮಡಿಕೇರಿ ಕೊಡವ ಸಮಾಜಕ್ಕೆ ಕಾಮಗಾರಿಯ ಮೇಲ್ವಿಚಾರಣೆಯ ಉಸ್ತುವಾರಿ ವಹಿಸಬೇಕು. ಹೀಗಾದಾಗ ಕಾಮಗಾರಿ ಪೂರ್ಣವಾಗಲು ಸಾಧ್ಯ. ಮಾತ್ರವಲ್ಲದೇ, ಹೆರಿಟೇಜ್ ಸೆಂಟರ್‍ನ ಭವಿಷ್ಯದ ಅಭಿವೃದ್ದಿ ಕಾಮಗಾರಿಗಳು, ಬೆಳವಣಿಗೆ, ನಿರ್ವಹಣೆ ಸರಕಾರ ಹಣ ಬಿಡುಗಡೆಗೂ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕೊಡವ ಹೆರಿಟೇಜ್ ಸೆಂಟರ್ ಯೋಜನೆ ಜಾರಿಯಾಗುವ ಸಂದರ್ಭ ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸಿದಾಗ ಉಕ್ಕಡ ಬಳಿಕ ಇಂದಿನ ಜೈಲಿರುವ ಪ್ರದೇಶದಲ್ಲಿ ಜಾಗ ಗುರುತಿಸಲಾಗಿತ್ತು. ಬಳಿಕ ಕರವಲೆ ಬಾಡಗದಲ್ಲಿ 5 ಎಕರೆ ಸ್ಥಳ ನಿಗಧಿ ಮಾಡಲಾಯಿತು. ಜಿಲ್ಲಾಧಿಕಾರಿ, ಶಾಸಕರು, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಒಂದು ಸಮಿತಿಯನ್ನೂ ರಚಿಸಲಾಗಿತ್ತಲ್ಲದೇ, ಆ ಸಮಿತಿಯಲ್ಲಿ ತಾನೂ ಕೂಡ ಸದಸ್ಯನಾಗಿದ್ದೆ. ಹೆರಿಟೇಜ್ ಸೆಂಟರ್ ಸಭೆಯ ಸಂದರ್ಭದಲ್ಲೂ ಆಯಾ ಜನಾಂಗಕ್ಕೆ ಸೇರಿದ ಆಚಾರ ವಿಚಾರಗಳನ್ನು ಆ ಸಮುದಾಯ ಮುನ್ನಡೆಸಿಕೊಂಡು ಹೋಗಬೇಕು. ಅದರ ಯೋಜನೆಗಳನ್ನು ಆ ಸಮುದಾಯದ ಮುಂದಾಳತ್ವದಲ್ಲಿಯೇ ಅನುಷ್ಟಾನಗೊಳಿಸಬೇಕು ಎಂದು 15 ವರ್ಷಗಳ ಹಿಂದೆಯೇ ಹೇಳಿದ್ದೆ ಎಂದು ಸ್ಮರಿಸಿದರು.
ಕೊಡವ ಜನಾಂಗಕ್ಕೆ ಸಂಬಂಧಿಸಿದ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ ಹೆರಿಟೇಜ್ ಸೆಂಟರ್‍ನಲ್ಲಿ ಮ್ಯೂಸಿಯಂ ರೂಪಿಸಬೇಕು ಎಂದು ಸಭೆಯಲ್ಲಿ ಹೇಳಿದ್ದೆ. ಭಿನ್ನಮತಗಳಿಂದಾಗಿ ಕೊಡವ ಹೆರಿಟೇಜ್ ಯೋಜನೆ ಸರಕಾರದ ಮೂಲಕ ಅನುಷ್ಠಾನಗೊಳ್ಳುವಂತ್ತಾಗಿದೆ. ಕೊಡವ ಸಮಾಜಗಳಿಗೆ ಇದರ ಉಸ್ತುವಾರಿ ನೀಡಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಎಂ.ಸಿ. ನಾಣಯ್ಯ ಬೇಸರ ವ್ಯಕ್ತಪಡಿಸಿದರು.
ಕೊಡವ ಹರಿಟೇಜ್ ಸೆಂಟರ್ ಯೋಜನೆಯನ್ನು ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಕೊಡಗಿನವರಾದ “ರತಿ ಝಾ” ಅವರು ಜಾರಿಗೆ ತಂದಿದ್ದು ಆರಂಭಿಕ ಅನುದಾನವನ್ನು ನೀಡಿದ್ದರು. ಈಗಾಗಲೇ ಈ ಯೋಜನೆಗಾಗಿ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿರುವುದಾಗಿ ಮಾಹಿತಿ ಇದೆ. ಹೀಗಿದ್ದರೂ ಕಾಮಗಾರಿ ಪೂರ್ಣವಾಗಿಲ್ಲ. ಯೋಜನೆ ಅನುಷ್ಟಾನವಾಗಲು ಮತ್ತಷ್ಟು ಕೋಟಿ ಖರ್ಚು ಮಾಡಬೇಕಾದ ಅನಿವಾರ್ಯವೂ ಎದುರಾಗಿದೆ.
ಕೊಡವ ಹೆರಿಟೇಜ್ ಸೆಂಟರ್ ಯೋಜನೆ ಕೊಡವ ಸಮುದಾಯದ ಪೂರ್ವಿಕರು ಅನಾಧಿ ಕಾಲದಿಂದಲೂ ನಡೆಸಿಕೊಂಡು ಬಂದ ಪದ್ದತಿ, ಆಚಾರ ವಿಚಾರ, ಸಂಸ್ಕøತಿ, ಉಡುಗೆ ತೊಡುಗೆ, ಬಟ್ಟೆ ಬರೆ, ಪರಿಕರಗಳು, ಹುಟ್ಟು ಸಾವಿನ ಆಚರಣೆ, ಮದುವೆ ಸೇರಿದಂತೆ ಹಬ್ಬ ಹರಿದಿನಗಳನ್ನು ಪರಿಚಯಿಸುವ ಒಂದು ಯೋಜನೆ. ಇದನ್ನು ಆ ಸಮಾಜವೇ ಮುನ್ನಡೆಸಬೇಕು. ಸರಕಾರದಿಂದ, ಪ್ರವಾಸೋದ್ಯಮ ಇಲಾಖೆಯಿಂದ ಇದನ್ನು ಅನುಷ್ಟಾನಗೊಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವೇ ಎಂದು ನಾಣಯ್ಯ ಪ್ರಶ್ನಿಸಿದರು.