ಆರ್ಜಿ ಪಂಚಾಯ್ತಿ ವ್ಯಾಪ್ತಿಯ ಒತ್ತುವರಿ ‘ಗೋಮಾಳ’ ಜಾಗ ತೆರವು : 15 ಎಕರೆ ಪ್ರದೇಶಕ್ಕೆ ಬೇಲಿ ನಿರ್ಮಾಣ

25/11/2020

ಮಡಿಕೇರಿ ನ.25 : ವಿರಾಜಪೇಟೆ ತಾಲ್ಲೂಕಿನ ಆರ್ಜಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ‘ಗೋಮಾಳ’ದ ಜಮೀನನ್ನು ತೆರವುಗೊಳಿಸಿರುವ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಬೇಲಿ ಅಳವಡಿಸಿದ್ದಾರೆ.
ಆರ್ಜಿಯಲ್ಲಿ 89.06 ಎಕರೆ ಸರ್ಕಾರಿ ಸ್ಥಳ ಗೋಮಾಳವೆಂದು ನಿಗದಿಗೊಳಿಸಲಾಗಿತ್ತು. ಆದರೆ, ಈ ಜಾಗವನ್ನು ಕೆಲ ಮಂದಿ ಅತಿಕ್ರಮಿಸಿಕೊಂಡು, ಕೃಷಿ ಚುಟುವಟಿಕೆಳನ್ನು ನಡೆಸಿದ್ದರು. ಇದನ್ನು ಗಮನಿಸಿದ ಆರ್ಜಿ ಮತ್ತು ಬೇಟೋಳಿ ಗ್ರಾಮದ ಗ್ರಾಮಸ್ಥರು ಗೋಮಾಳ ಸಂರಕ್ಷಣಾ ಸಮಿತಿ ರಚಸಿಕೊಂಡು ಅತಿಕ್ರಮಿತ ಜಾಗ ತೆರವಿಗೆ ನಡೆಸಿದ ಮೂರು ದಶಕಗಳ ಸುದೀರ್ಘ ಕಾನೂನು ಹೋರಾಟದ ಫಲವಾಗಿ ಇದೀಗ ಒತ್ತುವರಿ ತೆರವು ಆರಂಭಗೊಂಡಿದೆ.
ವಿರಾಜಪೇಟೆ ತಾಲ್ಲೂಕು ದಂಡಾಧಿಕಾರಿಗಳಾದ ಎಂ.ಎಲ್.ನಂದೀಶ್ ಅವರ ಉಪಸ್ಥಿತಿಯಲ್ಲಿ ಪ್ರಥಮ ಹಂತವಾಗಿ ಒಟ್ಟು 15 ಎಕರೆ 12 ಸೆಂಟ್ ಜಾಗಕ್ಕೆ ಬೇಲಿ ಹಾಕಿ ಅತಿಕ್ರಮ ಪ್ರವೇಶ ನಿಷೇಧದ ಫಲಕವನ್ನು ಆಳವಡಿಸಲಾಗಿದೆ.
ಒಟ್ಟು 89.06 ಎಕರೆ ಸರ್ಕಾರಿ ಜಾಗವಿದ್ದು, ಇದರಲ್ಲಿ ಒಂದಷ್ಟು ಜಾಗ ಅತಿಕ್ರಮಣಕ್ಕೆ ಒಳಗಾಗಿತ್ತು. ಲಭ್ಯವಿದ್ದ ಜಾಗದಲ್ಲಿ ಸರ್ಕಾರವು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 5 ಎಕರೆ, ವಾಲ್ಮೀಕಿ ಭವನ ನಿರ್ಮಾಣಕ್ಕೆ 50 ಸೆಂಟ್, ಪಟ್ಟಣ ಪಂಚಾಯಿತಿ ಕಸ ವಿಲೆವಾರಿಗಾಗಿ 0.5 ಎಕರೆ, ನಕ್ಸಲ್ ನಿಗ್ರಹ ದಳ ಸಂಸ್ಥೆಗೆ 1 ಎಕರೆ, ಹಿಂದೂ ರುದ್ರ ಭೂಮಿಗೆ 1 ಎಕರೆ, ಮುಸ್ಲಿಂ ಖಬಾರ್‍ಸ್ತಾನ್‍ಗೆ 1 ಎಕರೆ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಯೋಜನೆಗಾಗಿ 3 ಎಕರೆ ಜಾಗವನ್ನು ಮೀಸಲಿಟ್ಟಿದ್ದು, ಆಯಾಯ ಸ್ಥಳಗಳಲ್ಲಿ ಕೆಲವು ಯೋಜನೆಗಳು ಅನುಷ್ಠಾನಗೊಂಡಿದೆ.
ಉಳಿದ 47 ಎಕರೆ 47 ಸೆಂಟ್ ಜಾಗದಲ್ಲಿ 15ಎಕರೆ 12 ಸೆಂಟು ಸ್ಥಳಕ್ಕೆ ಹೋರಾಟ ಸಮಿತಿ ಕಾರ್ಯಕರ್ತರು ಕಲ್ಲು ಕಂಬ ನೆಟ್ಟು ತಂತಿ ಬೇಲಿ ಅಳವಡಿಸಿದರು. ಒತ್ತುವರಿಗೊಂಡ ಉಳಿದ ಜಮೀನನ್ನು ಒಂದು ತಿಂಗಳೊಳಗೆ ತೆರವುಗೊಳಿಸಬೇಕೆಂದು ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.