ಸೋಮವಾರಪೇಟೆಯ ಅಬ್ಬುರ್‌ಕಟ್ಟೆಯಲ್ಲಿ ನೈರ್ಮಲ್ಯ ಸಾಕ್ಷರತಾ ಅಭಿಯಾನ ಕಾರ್ಯಾಗಾರ

25/11/2020

ಮಡಿಕೇರಿ ನ. 25 : ಮೈಸೂರಿನ ಓಡಿಪಿ ಸಂಸ್ಥೆ ಹಾಗೂ ಬೆಂಗಳೂರಿನ ನಬಾರ್ಡ್ ವತಿಯಿಂದ ಸೋಮವಾರಪೇಟೆಯ ಅಬ್ಬುರ್‍ಕಟ್ಟೆ ಗ್ರಾಮದಲ್ಲಿ ನೈರ್ಮಲ್ಯ ಸಾಕ್ಷರತಾ ಅಭಿಯಾನ ಕಾರ್ಯಾಗಾರವನ್ನು ನಡೆಸಲಾಯಿತು.
ಅಬ್ಬುರ್‌ಕಟ್ಟೆಯ ಗ್ರಾ.ಪಂ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ನಬಾರ್ಡಿನ ಕೊಡಗು ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಶ್ರೀನಿವಾಸ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ದೇಶದ ಪ್ರಮುಖ ಯೋಜನೆಯಾದ, ಸ್ವಚ್ಚಭಾರತ ಅಭಿಯಾನದಡಿ ವಾಶ್ (ವಾಟರ್ ಎಂಡ್ ಸಾನಿಟೇಷನ್) ಸಾಕ್ಷರತಾ ಅಭಿಯಾನವನ್ನು ಕರ್ನಾಟಕ ರಾಜ್ಯದ 100 ಹಳ್ಳಿಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಕೊಡಗಿನಲ್ಲಿ ಈ ಕಾರ್ಯಕ್ರಮಗಳನ್ನು ಓಡಿಸಿ ಸಂಸ್ಥೆಯ ಸಹಯೋಗದೊಂದಿಗೆ ಸೋಮವಾರಪೇಟೆಯ ಐದು ಜಲನಯನ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಇದರ ಮುಖ್ಯ ಉದ್ದೇಶ ಸಮುದಾಯ ಮತ್ತು ವೈಯಕ್ತಿಕ ನೈರ್ಮಲ್ಯತೆಯನ್ನು ಕಾಪಾಡುವುದರ ಮೂಲಕ ದೇಶವನ್ನು ಆರೋಗ್ಯಕರ ಸಮಾಜವನ್ನಾಗಿ ಪರಿವರ್ತಿಸುವುದು ಎಂದು ಹೇಳಿದರು.
ಆರೋಗ್ಯ ಇಲಾಖೆಯ ದಿವ್ಯ ಮಾತನಾಡಿ, ಸರ್ಕಾರವು ಹಲವಾರು ವರ್ಷಗಳಿಂದ ಜನರ ಆರೋಗ್ಯ ಮಟ್ಟ ಸುಧಾರಿಸಲು ವಿವಿಧ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ನೀಡುತ್ತಾ ಬಂದಿದೆ. ಆದರೆ ಜನರು ಇದರ ಉಪಯೋಗವನ್ನು ಪಡೆಯಲು ಮುಂದೆ ಬರುತ್ತಿಲ್ಲ. ಆರೋಗ್ಯ ತಪಾಸಣೆ ಮಾಡಲು ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ರೂ.ಗಳನ್ನು ಕೊಟ್ಟು ತಪಾಸಣೆ ಮಾಡಿಕೊಳ್ಳುವ ಬದಲು ಸರ್ಕಾರಿ ಆಸ್ಪತ್ರೆ ಮತ್ತು ಯೋಜನೆಗಳನ್ನು ಉಪಯೋಗಿಸಿಕೊಂಡು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದರು.
ಅಲ್ಲದೆ ವೈಯಕ್ತಿಕ ಸ್ವಚ್ಛತೆಯ ಜೊತೆಗೆ ಸಾಮೂಹಿಕ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಬೇಕು ಎಂದರು.
ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಶೌಚಾಲಯ ಬಳಸಬೇಕು, ಹೊಸ ಹೊಸ ರೋಗಗಳು ಹರಡದಂತೆ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಬೇಕು, ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಓಡಿಪಿ ಸಂಸ್ಥೆಯ ಗ್ರಾಮ ವಿಕಾಸ ಪುರುಷ ಒಕ್ಕೂಟದ ಸಂಯೋಜಕ ಜಾನ್ ಬಿ. ದಾಡ್ರಿಗಸ್ ಮಾತಾನಾಡಿ, ದೇಶವು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಆರೋಗ್ಯಕರ ಸಮಾಜವನ್ನು ನಿರ್ಮಿಸಬೇಕು, ನೈರ್ಮಲ್ಯತೆ ಜೀವನದ ಒಂದು ಪ್ರಮುಖ ಭಾಗ. ಮನುಷ್ಯನ ಜೀವನದಲ್ಲಿ ಅತ್ಯಂತ ಶ್ರೇಷ್ಟ ಸಂಪತ್ತೆಂದರೆ ಆರೋಗ್ಯ, ದೇಶವು ವೈಜ್ಞಾನಿಕವಾಗಿ ಆರ್ಥಿಕವಾಗಿ ಎಷ್ಟು ಮುಂದುವರಿದರು ಜನರ ಆರೋಗ್ಯ ಮಟ್ಟ ಸುಧಾರಿಸದಿದ್ದರೆ ದೇಶದ ಅಭಿವೃದ್ಧಿ ಎಂದು ವಿಶ್ಲೇಷಿಸಲು ಸಾಧ್ಯವಿಲ್ಲ. ಗಾಂಧಿಜೀಯವರು ಹೇಳಿದಂತೆ ದೇಶದ ಅಭಿವೃದ್ಧಿಯು ದೇಶದ ನೈರ್ಮಲ್ಯತೆ ಮೇಲೆ ಅವಲಂಬಿತವಾಗಿದೆ. ಈ ನಿಟ್ಟಿನಲ್ಲಿ ಎಲ್ಲರು ವೈಯಕ್ತಿಕ ಮತ್ತು ಸಾಮೂಹಿಕ ಸ್ವಚ್ಛತೆಗೆ ಗಮನ ಹರಿಸುವಂತೆ ಸಲಹೆ ನೀಡಿದರು.

ಪ್ರತಿಯೊಬ್ಬರು ಆರೋಗ್ಯದ ದೃಷ್ಟಿಯಿಂದ ಶೌಚಾಲಯವನ್ನು ಉಪಯೋಗಿಸಬೇಕು. ಮನೆಗೊಂದು ಶೌಚಾಲಯ, ಊರಿಗೊಂದು ದೇವಾಲಯ. ಇದರಂತೆ ಪ್ರತಿಯೊಬ್ಬ ಮನುಷ್ಯನ ಆರೋಗ್ಯದ 4 ಮಜಲುಗಳಾದ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡಿದರೆ ಪರಿಸರವು ನಮಗೆ ಉತ್ತಮ ಆರೋಗ್ಯವನ್ನು ಕೊಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಕೃತಿಯನ್ನು ಮಲಿನಗೊಳಿಸದೆ ನೀರು, ಗಾಳಿ, ಬೆಳಕು, ಆಹಾರ ಇವುಗಳನ್ನು ಉಳಿಸಲು ಎಲ್ಲಾರು ಕಂಕಣಬದ್ದರಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯರಾದ ಪೂರ್ಣಿಮ ಗೋಪಾಲ್, ಗ್ರಾ.ಪಂ ಅಧಿಕಾರಿ ನಯನ, ಜಲನಯನ ಸಮಿತಿಯ ಸದಸ್ಯರಾದ ಕಲೀಸ್ತ ಡಿಸಿಲ್ವ, ಮೋಹನ್ ದಾಸ್, ಓ.ಡಿ.ಪಿ. ಕಾರ್ಯಕರ್ತರಾದ ಸುಂದರ್ ದಾಸ್, ಕುಮಾರಿ ಹಾಗೂ ಗ್ರಾಮಸ್ಥರು ಹಾಜರಿದ್ದರು.