ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗೆ ಅರ್ಜಿ ಆಹ್ವಾನ

25/11/2020

ಮಡಿಕೇರಿ ನ.25 : ಆತ್ಮ ನಿರ್ಭರ ಅಭಿಯಾನದಡಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆ ಸಂಬಂಧ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಮಂತ್ರಾಲಯವು, ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯನ್ನು ಹೊಸದಾಗಿ ಪ್ರಾರಂಭಿಸುತ್ತಿದೆ. ಈ ಯೋಜನೆಯ ಮೂಲ ಉದ್ದೇಶವು ಆಹಾರ ಸಂಸ್ಕರಣೆಯ ಅಸಂಘಟಿತ ಅತೀ ಸಣ್ಣ ಉದ್ಯಮ ಕ್ಷೇತ್ರದ ಕೊಡುಗೆ ಹಾಗೂ ಅವುಗಳ ಕಾರ್ಯಕ್ಷಮತೆಗೆ ತೊಡಕ್ಕಾಗುತ್ತಿರುವ ಸವಾಲುಗಳನ್ನು ಗಣನೆಗೆ ತೆಗೆದುಕೊಂಡು, ಅತೀ ಸಣ್ಣ ಉದ್ಯಮಗಳು ಸಾಮಾನ್ಯ ಸೇವೆಗಳನ್ನು ಪಡೆದುಕೊಳ್ಳುವಂತೆ ಉತ್ತೇಜಿಸುವುದು. ಈ ಯೋಜನೆಯ ಅನುಷ್ಠಾನಕ್ಕೆ ಕೃಷಿ ಇಲಾಖೆಯು ನೋಡಲ್ ಇಲಾಖೆಯಾಗಿದೆ. ಈ ಯೋಜನೆಯಡಿ, ವೈಯಕ್ತಿಕ ಕಿರು ಆಹಾರ ಸಂಸ್ಕರಣಾ ಘಟಕಗಳ ಉನ್ನತೀಕರಣ, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ಉತ್ಪಾದಕರ ಸಹಕಾರ ಸಂಘಗಳು ಹಾಗೂ ಸಹಕಾರ ಸೊಸೈಟಿಗಳಿಗೆ ಬಂಡವಾಳ ಹೂಡಿಕೆ, ಸಾಮಾನ್ಯ ಮೂಲಭೂತ ಸೌಕರ್ಯಕ್ಕಾಗಿ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆಗೆ ಬೆಂಬಲ ನೀಡಲಾಗುತ್ತದೆ.
ಇದರಲ್ಲಿ ಕಚ್ಚಾ ವಸ್ತುಗಳ ಸಂಗ್ರಹ, ಸಾಮಾನ್ಯ ಸೇವೆ ಪಡೆಯುವುದು ಹಾಗೂ ಉತ್ಪನ್ನಗಳ ಮಾರ್ಕೆಟಿಂಗ್ ವಿಷಯಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ಲಾಭವನ್ನು ಪಡೆಯಲು ಒಂದು ಜಿಲ್ಲೆ ಒಂದು ಉತ್ಪನ್ನ(ಒಡಿಒಪಿ) ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ. ಕೊಡಗು ಜಿಲ್ಲೆಯಲ್ಲಿ ವಿಸ್ತಾರವಾಗಿ ಉತ್ಪಾದಿಸಲಾಗುವಂತಹ ಕಾಫಿ ಬೆಳೆಯನ್ನು ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಸೂಕ್ತ ಫಲಾನುಭವಿಗಳನ್ನು ಗುರುತಿಸುವಿಕೆ, ಯೋಜನಾ ವರದಿ ಸಿದ್ಧತೆ, ಫಲಾನುಭವಿಗಳು ಸಾಲ ಪಡೆಯಲು ಬ್ಯಾಂಕ್‍ನೊಂದಿಗೆ ಸಂಪರ್ಕ, ಘಟಕಗಳ ನೋಂದಣಿ ಹಾಗೂ ಕೈ ಆಸರೆ ಬೆಂಬಲ ನೀಡುವುದಕ್ಕೆ ಜಿಲ್ಲಾ ಮಟ್ಟಕ್ಕೆ ಒಬ್ಬರು ಜಿಲ್ಲಾ ಸಂಪನ್ಮೂಲ ವ್ಯಕ್ತಿಗೆ ಅರ್ಜಿ ಆಹ್ವಾನಿಲಾಗಿದೆ.
ಆಹಾರ ತಂತ್ರಜ್ಞಾನದ, ಆಹಾರ ಎಂಜಿನಿಯರಿಂಗ್‍ನಲ್ಲಿ ಪ್ರತಿಷ್ಠಿತ ರಾಷ್ಟ್ರ, ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ, ಸಂಸ್ಥೆಗಳಿಂದ ಡಿಪ್ಲೊಮಾ, ಪದವಿ ಪಡೆದಿರಬೇಕು. ಇವರಿಗೆ ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ ತಂತ್ರಜ್ಞಾನ ಉನ್ನತೀಕರಣ, ಹೊಸ ಉತ್ಪನ್ನ ಅಭಿವೃದ್ಧಿ, ಗುಣಮಟ್ಟದ ಖಾತ್ರಿ, ಆಹಾರ ಭದ್ರತಾ ನಿರ್ವಹಣೆಗಾಗಿ ಸಲಹಾ ಸೇವೆಗಳನ್ನು ಒದಗಿಸಿದ ಅನುಭವವಿರಬೇಕು. ಕನ್ನಡ ಭಾಷಾ ಜ್ಞಾನ ಹೊಂದಿರುವ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆ, ಬ್ಯಾಂಕಿಂಗ್, ಡಿಪಿಆರ್ ಸಿದ್ಧಪಡಿಸುವಿಕೆಯಲ್ಲಿ ಹಾಗೂ ತರಬೇತಿಯಲ್ಲಿ ಅನುಭವವುಳ್ಳ ವ್ಯಕ್ತಿಗಳಿಗೆ ಮೊದಲ ಆದ್ಯತೆ. ಸಂಪನ್ಮೂಲ ವ್ಯಕ್ತಿಗಳಿಗೆ ನೀಡಲಾಗುವ ಹಣ ಪಾವತಿಯನ್ನು ಅವರು ಬೆಂಬಲಿಸಿದಂತಹ ಪ್ರತಿ ಫಲಾನುಭವಿಯನ್ನು ಆಧರಿಸಿ, ಬ್ಯಾಂಕಿನಿಂದ ಸಾಲ ಮಂಜೂರಾದ ನಂತರ ಬ್ಯಾಂಕಿನಿಂದ ಮಂಜೂರಾದ ಪ್ರತಿ ಸಾಲವನ್ನು ಆಧರಿಸಿ ರೂ.20 ಸಾವಿರಗಳನ್ನು 2 ಕಂತುಗಳಲ್ಲಿ ಪಾವತಿಸಲಾಗುವುದು. ಈ ಪೈಕಿ ಶೇ.50 ಮೊತ್ತವನ್ನು ಬ್ಯಾಂಕಿನಿಂದ ಸಾಲ ಮಂಜೂರಾದ ನಂತರ ಹಾಗೂ ಉಳಿದ ಶೇ.50 ಹಣವನ್ನು ಘಟಕಗಳು ಜಿಎಸ್‍ಟಿ, ಯುಡಿವೈಒಜಿ ಆಧಾರ್ ನೋಂದಣಿಯನ್ನು ಪಡೆದ ನಂತರ ಎಫ್‍ಎಸ್‍ಎಸ್‍ಎಐ ವತಿಯಿಂದ ಪ್ರಮಾಣೀಕೃತ ಅನುಸರಣೆಯನ್ನು ಪಡೆದ ನಂತರ ನೀಡಲಾಗುವುದು. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಡಿಸೆಂಬರ್, 10 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಶಬಾನಾ ಎಂ.ಶೇಕ್ ಅವರು ತಿಳಿಸಿದ್ದಾರೆ.