ಪರಿಶಿಷ್ಟರಿಗೆ ಭೂಮಿ : ಸ್ಥಳೀಯ ಸಂಸ್ಥೆಗಳ ಮೂಲಕ ಪ್ರಸ್ತಾವನೆ ಸಲ್ಲಿಸಿ : ಜಿಲ್ಲಾಧಿಕಾರಿ ಸೂಚನೆ

25/11/2020

ಮಡಿಕೇರಿ ನ.25 : ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳಿಗೆ ನಿವೇಶನ, ಸಮುದಾಯ ಭವನ, ಸ್ಮಶಾನಕ್ಕೆ ಭೂಮಿ ಮತ್ತಿತರ ಸಂಬಂಧ ಆಯಾಯ ಸ್ಥಳೀಯ ಸಂಸ್ಥೆಗಳ (ಗ್ರಾ.ಪಂ., ಪ.ಪಂ., ನಗರಸಭೆ) ಮೂಲಕ ತಹಶೀಲ್ದಾರರು ಅಥವಾ ಉಪ ವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಕಂದಾಯಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಜಾಗ ಗುರುತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೇಕೇರಿಯಲ್ಲಿನ 24 ಪರಿಶಿಷ್ಟ ಕುಟುಂಬಗಳು ಗುಡ್ಡದಲ್ಲಿ ವಾಸ ಮಾಡುತ್ತಿದ್ದು, ಮಳೆಗಾಲದಲ್ಲಿ ಕುಸಿಯುವ ಆತಂಕದಲ್ಲಿ ಜೀವನ ಸಾಗಿಸುತ್ತಿದ್ದು, ಈ ಕುಟುಂಬಗಳಿಗೆ ಪರ್ಯಾಯ ಜಾಗ ಒದಗಿಸಬೇಕಿದೆ ಎಂದು ಸಮಿತಿ ಸದಸ್ಯರಾದ ಸುಕುಮಾರ್ ಅವರು ಕೋರಿದರು.
ಇದಕ್ಕೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆಯಾಯ ಗ್ರಾ.ಪಂ.ಮೂಲಕ ಕಂದಾಯ ಇಲಾಖೆಗೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ಮಾಡಿದರು.
ವಿರಾಜಪೇಟೆ ತಾಲ್ಲೂಕಿನ ತಟ್ಟೆಕೆರೆ ಬಳಿ ವಾಸಿಸುತ್ತಿರುವ ಜನರು ಈಗಾಗಲೇ ಗುರುತಿಸಲಾಗಿರುವ ಜಾಗಕ್ಕೆ ಹೋಗದಿರುವ ಬಗ್ಗೆ ಮಾಹಿತಿ ಇದ್ದು, ಇದನ್ನು ಕೈಬಿಡುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಸಮಿತಿ ಸದಸ್ಯರಾದ ಪಳನಿ ಪ್ರಕಾಶ್ ಅವರು ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಹೋಬಳಿ ಹಚ್ಚಿನಾಡು ಗ್ರಾಮ ಕಾವೇರಿ ನದಿ ದಡದಲ್ಲಿದ್ದು, ಇಲ್ಲಿನ 12 ಕುಟುಂಬಗಳ 5 ಮನೆಗಳು ಪ್ರವಾಹಕ್ಕೆ ಕೊಚ್ಚಿಹೋಗಿದ್ದು, ಸೂಕ್ತ ಪರಿಹಾರ ದೊರಕಿಸಬೇಕು. ಈ 12 ಕುಟುಂಬಗಳಿಗೆ ಪರ್ಯಾಯ ಜಾಗ ಗುರ್ತಿಸಬೇಕು ಎಂದು ಅವರು ಕೋರಿದರು.
ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡು ಸಂಕಷ್ಟಕ್ಕೆ ತುತ್ತಾದವರ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೀಡಲಾಗುತ್ತಿದ್ದು, ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಬಾಳುಗೋಡು ಬಳಿ ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳಿಗೆ ಜಾಗ ಗುರುತಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಪಳನಿ ಪ್ರಕಾಶ್ ಅವರು ಗಮನ ಸೆಳೆದರು.
ವಿರಾಜಪೇಟೆ ತಾಲ್ಲೂಕಿನ ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಸಿಂಕೋನ ಕಾಲೋನಿಯಲ್ಲಿ 15 ಕುಟುಂಬಗಳು ವಾಸ ಮಾಡುತ್ತಿದ್ದು, ಸರಿಯಾದ ರಸ್ತೆ ಸಂಪರ್ಕವಿಲ್ಲದೆ ಅಲ್ಲಿನ ನಾಗರಿಕರು ಕಿರಿ ಕಿರಿ ಅನುಭವಿಸುತ್ತಿದ್ದು, ಸರಿಯಾದ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಪಳನಿ ಪ್ರಕಾಶ್ ಅವರು ಮನವಿ ಮಾಡಿದರು.
ಸಮಿತಿ ಸದಸ್ಯರಾದ ಮುತ್ತಪ್ಪ ಅವರು ಸೋಮವಾರಪೇಟೆ ತಾಲ್ಲೂಕಿನ ಗರಗಂದೂರು, ಹೊಸತೋಟ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟರು ವಾಸಿಸುವ ಗ್ರಾಮಗಳಲ್ಲಿ ಚರಂಡಿ, ರಸ್ತೆ, ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದರು.
ಜಿಲ್ಲೆಯ ನಾನಾ ಕಡೆಗಳಲ್ಲಿ ಪರಿಶಿಷ್ಟರು ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದು, ಇವರಿಗೆ ಜಾಗದ ಹಕ್ಕು ಪತ್ರ ಇರುವುದಿಲ್ಲ. ಆದ್ದರಿಂದ ಇಂತಹ ಕುಟುಂಬಗಳನ್ನು ಗುರುತಿಸಿ ಹಕ್ಕುಪತ್ರ ನೀಡುವಂತಾಗಬೇಕು ಎಂದು ಅವರು ಕೋರಿದರು.
ಸಮಿತಿ ಸದಸ್ಯರಾದ ಜಾಯ್ಸ್ ಮೆನೇಜಸ್ ಅವರು ಪರಿಶಿಷ್ಟರ ಕಾಲೋನಿಗಳಿಗೆ ಅಗತ್ಯ ಮೂಲ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ ವಿದ್ಯಾಭ್ಯಾಸಕ್ಕೆ ಇನ್ನೂ ಹೆಚ್ಚಿನ ಸಹಕಾರ ನೀಡಬೇಕಿದೆ ಎಂದರು.
ಸಮಿತಿ ಸದಸ್ಯರಾದ ಸುಕುಮಾರ್ ಅವರು ಹಾಕತ್ತೂರು ತೊಂಬತ್ತು ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಭಾರತಿ, ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ಅನುಪಾಲನಾ ವರದಿ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ತಹಶೀಲ್ದಾರರಾದ ನಂದೀಶ್, ಪೌರಾಯುಕ್ತ ರಾಮದಾಸ್, ಪ.ಪಂ. ಮುಖ್ಯಾಧಿಕಾರಿಗಳಾದ ಶ್ರೀಧರ್, ನಾಚಪ್ಪ ಇತರರು ಹಾಜರಿದ್ದರು.