ಸೋಲಾರ್ ಬೇಲಿ ವಿದ್ಯುತ್ ಸ್ಪರ್ಷ : ಅಂದಗೋವೆ ಪೈಸಾರಿಯಲ್ಲಿ ಕಾಡಾನೆ ಸಾವು

25/11/2020

ಮಡಿಕೇರಿ ನ.25 : ಸೋಲಾರ್ ಬೇಲಿಯಲ್ಲಿದ್ದ ವಿದ್ಯುತ್ ಸ್ಪರ್ಷಗೊಂಡು ಸುಮಾರು 25 ವರ್ಷದ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಸೋಮವಾರಪೇಟೆಯ ಕೊಡಗರಹಳ್ಳಿ ಗ್ರಾ.ಪಂ ವ್ಯಾಪ್ತಿಯ ಅಂದಗೋವೆ ಪೈಸಾರಿಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಎಂ.ಎಸ್.ಮಹಮ್ಮದ್ ಹನೀಫ್ ಎಂಬುವವರು ಮರ ಗೆಣಸು ಬೆಳೆದಿರುವ ತಮ್ಮ ತೋಟಕ್ಕೆ ಸೋಲಾರ್ ಬೇಲಿ ಅಳವಡಿಸಿದ್ದರು. ಆಹಾರ ಅರಸಿ ಬಂದ ಕಾಡಾನೆ ಈ ಬೇಲಿ ದಾಟುವ ಪ್ರಯತ್ನದಲ್ಲಿದ್ದಾಗ ವಿದ್ಯುತ್ ಸ್ಪರ್ಷಗೊಂಡು ಸ್ಥಳದಲ್ಲೇ ಮೃತಪಟ್ಟಿದೆ. ಎರಡು ದಿನಗಳ ಹಿಂದೆಯೇ ಆನೆ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಗ್ರಾಮಸ್ಥರು ನೀಡಿದ ಮಾಹಿತಿ ಹಿನ್ನೆಲೆ ಇಂದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡರು.
ಆರ್‍ಎಫ್‍ಓ ಅನನ್ಯಕುಮಾರ್, ಎಸಿಎಫ್ ನೆಹರು, ಅರಣ್ಯಾಧಿಕಾರಿ ಅನಿಲ್ ಡಿಸೋಜ, ಕುಶಾಲನಗರ ಡಿವೈಎಸ್‍ಪಿ ಶೈಲೆಂದ್ರ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಡಿ.ಎಸ್.ಪುನೀತ್, ಸೆಸ್ಕ್ ಇಲಾಖೆ ಅಧಿಕಾರಿ ಹಾಗೂ ಪಶುವೈದ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಸೋಲಾರ್ ಬೇಲಿಗೆ ವಿದ್ಯುತ್ ಸಂಪರ್ಕವಾಗಿರುವ ಬಗ್ಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.