ನ.29ರಂದು ಪೊನ್ನಂಪೇಟೆ ನೂತನ ತಾಲ್ಲೂಕಿಗೆ ಚಾಲನೆ : ಅಗತ್ಯವಿರುವ 12 ಹುದ್ದೆಗಳ ಭರ್ತಿಗೆ ಸರಕಾರದ ಆದೇಶ

25/11/2020

ಮಡಿಕೇರಿ ನ.25 : ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕನ್ನು ವಿಭಜಿಸಿ ಪೊನ್ನಂಪೇಟೆಯನ್ನು ನೂತನ ತಾಲೂಕು ಕೇಂದ್ರವನ್ನಾಗಿ ಸರಕಾರ ಈಗಾಗಲೇ ಘೋಷಿಸಿದ್ದು, ನ.29ರಂದು ನೂತನ ತಾಲ್ಲೂಕಿಗೆ ಕಂದಾಯ ಸಚಿವ ಆರ್.ಅಶೋಕ್ ಅವರು ಚಾಲನೆ ನೀಡಲಿದ್ದಾರೆ.
ಈ ನಡುವೆ ನೂತನ ತಾಲೂಕು ಕಚೇರಿಗೆ ಅಗತ್ಯವಿರುವ ಒಟ್ಟ 12 ಹುದ್ದೆಗಳನ್ನು ಭರ್ತಿ ಮಾಡುವಂತೆ ಬುಧವಾರ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ವಿ.ಟಿ.ರಾಜ್ಯಶ್ರೀ ಅವರು ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ನೂತನ ತಾಲೂಕಿನ ಕಾರ್ಯಚಟುವಟಿಕೆಗಳು ಶೀಘ್ರವಾಗಿ ಆರಂಭವಾಗುವ ಲಕ್ಷಣಗಳು ಗೋಚರಿಸಿದೆ.
ಕಳೆದ (2019-20ನೇ) ಸಾಲಿನ ಆಯವ್ಯಯದಲ್ಲಿ ಘೋಷಿಸಲಾದಂತೆ ಕೊಡಗು ಜಿಲ್ಲೆ ಪೊನ್ನಂಪೇಟೆ ಸೇರಿದಂತೆ ಒಟ್ಟು 12 ತಾಲೂಕುಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ರಚಿಸಲು ಆಡಳಿತಾತ್ಮಕ ಅನುಮೋನದೆ ನೀಡಲಾಗಿದ್ದು, ಹೊಸ ತಾಲೂಕು ರಚನೆಗೆ ಸಂಬಂಧಿಸಿದಂತೆ ಈಗಾಗಲೇ ಕೊಡಗು ಜಿಲ್ಲೆಯ ಪೊನ್ನಂಪೇಟೆ ನೂತನ ತಾಲೂಕನ್ನು ರಚಿಸಿ 2020ರ ಜು..3ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತಲ್ಲದೆ, ಆ.20ರ ಕರ್ನಾಟಕ ರಾಜ್ಯ ಪತ್ರದಲ್ಲೂ ಪ್ರಕಟವಾಗಿದೆ.
ಪ್ರಸ್ತಾವಿತ ಹೊಸ ತಾಲೂಕಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸೇವೆಗಳನ್ನು ನೀಡುವ ಮತ್ತು ಪರಿಣಾಮಕಾರಿಯಾಗಿ ಸಮರ್ಥ ಆಡಳಿತ ನೀಡುವ ಸಲುವಾಗಿ ಪೊನ್ನಂಪೇಟೆ ತಾಲೂಕು ಕೇಂದ್ರದಲ್ಲಿ ತಾಲೂಕು ಕಚೇರಿಯನ್ನು ಅಸ್ತಿತ್ವಕ್ಕೆ ತರಲು ಅವಶ್ಯವಿರುವ ಹುದ್ದೆಗಳನ್ನು ಸೃಜಿಸಲು ನಿರ್ಧರಿಸಿ ಸರಕಾರ ಈ ಆದೇಶ ಹೊರಡಿಸಿದೆ.
ಅದರಂತೆ ಪೊನ್ನಂಪೇಟೆ ತಾಲೂಕಿಗೆ ಒಬ್ಬರು ಗ್ರೇಡ್-1 ತಹಶೀಲ್ದಾರರು, ಒಬ್ಬರು ಶಿರಸ್ತೇದಾರ್, ಇಬ್ಬರು ಪ್ರಥಮ ದರ್ಜೆ ಸಹಾಯಕರು, ಒಬ್ಬರು ಆಹಾರ ನಿರೀಕ್ಷಕರು ಮತ್ತ ಮೂರು ಮಂದಿ ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ 8 ಮಂದಿಯನ್ನು ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ನೇಮಕಾತಿ ಮಾಡುವಂತೆ ಹಾಗೂ ಒಬ್ಬರ ಬೆರಳಚ್ಚುಗಾರ ಕಂ ಡಾಟಾ ಎಂಟ್ರಿ ಆಪರೇಟರ್, ಇಬ್ಬರು ಗ್ರೂಪ್ ಡಿ ನೌಕರರು ಮತ್ತು ಓರ್ವ ವಾಹನ ಚಾಲಕನನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಪೊನ್ನಂಪೇಟೆ ನೂತನ ತಾಲೂಕಿಗೆ ನ.29ರ ಪೂರ್ವಾಹ್ನ 10.30 ಗಂಟೆಗೆ ಕಂದಾಯ ಸಚಿವ ಆರ್.ಅಶೋಕ್ ಅವರು ಚಾಲನೆ ನೀಡಲಿರುವುದಾಗಿ ಹೇಳಲಾಗಿದೆ.
ಒಟ್ಟಾರೆಯಾಗಿ ದಕ್ಷಿಣ ಕೊಡಗಿನ ಜನತೆಯ ಬಹುಕಾಲದ ಬೇಡಿಕೆಯೊಂದು ಕೊನೆಗೂ ಈಡೇರಿಕೆಯಾಗುತ್ತಿರುವುದು ಆ ಭಾಗದ ಜನರಲ್ಲಿ ಸಂತಸ ಮೂಡಿಸಿದೆ.