542 ಕಿರಿಯ ಸಹಾಯಕರ ಹುದ್ದೆಗಳು ರದ್ದು

26/11/2020

ಬೆಂಗಳೂರು ನ.26 : ಬೊಕ್ಕಸಕ್ಕೆ ಭಾರೀ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಕ್ತಿಕೇಂದ್ರದಲ್ಲಿರುವ ಸುಮಾರು 542 ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದುಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸರ್ಕಾರದ ಪ್ರತೀಯೊಂದು ಇಲಾಖೆಯಲ್ಲಿಯೂ 2ರಿಂದ 3 ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದು, ಸರ್ಕಾರಕ್ಕೆ ಪ್ರತೀ ತಿಂಗಳು ಕನಿಷ್ಟವೆಂದರೂ ರೂ.2 ಕೋಟಿ ಹೊರೆಯಾಗುತ್ತಿದೆ. ಹೀಗಾಗಿ ಯಾವ ಇಲಾಖೆಗಳಲ್ಲಿ ಹೆಚ್ಚುವರಿಯಾಗಿ ಅನಗತ್ಯ ಸಿಬ್ಬಂದಿಗಳಿದ್ದಾರೋ ಅವರನ್ನು ಪುನಃ ಮಾತೃಇಲಾಖೆಗೆ ನಿಯೋಜನೆ ಮಾಡುವಂತೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ (ಡಿಪಿಎಆರ್) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ವರದಿಗಳು ತಿಳಿಸಿವೆ.
ಪ್ರಸ್ತುತ ವಿಧಾನಸೌಧ, ವಿಕಾಸದೌಧ ಹಾಗೂ ಎಂಎಸ್ ಬಹುಮಹಡಿ ಕಟ್ಟಡಗಳಲ್ಲಿ ಹುದ್ದೆಗಳನ್ನು ಮಂಜೂರು ಮಾಡಲಾಗಿದ್ದು, ಹಾಲಿ 3000-3500 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.