ತರ್ಮೆಕಾಡು ಪೈಸಾರಿ ವಿವಾದ : ವಿವಿಧ ಸಂಘಟನೆಗಳಿಂದ ಮಡಿಕೇರಿಯಲ್ಲಿ ಪ್ರತಿಭಟನೆ

26/11/2020

ಮಡಿಕೇರಿ ನ.26 : ವಿರಾಜಪೇಟೆ ತರ್ಮೆಕಾಡು ಪೈಸಾರಿಯಲ್ಲಿ ಕಳೆದ 60 ವರ್ಷಗಳಿಂದ ವಾಸ ಮಾಡುತ್ತಿರುವ ದಲಿತ ಆದಿವಾಸಿ ಬಡವರನ್ನು ಒಕ್ಕಲೆಬ್ಬಿಸದೆ ಎಲ್ಲರಿಗೂ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಸಿಸಿ), ಕೊಡಗು ರೈತ ಸಂಘ ಹಾಗೂ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ ಲೆನಿನ್ ವಾದಿ) ರೆಡ್‍ಸ್ಟಾರ್ ಕೊಡಗು ಜಿಲ್ಲಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಂಘಟನೆಯ ಪ್ರಮುಖರು ಹಾಗೂ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಎಐಕೆಸಿಸಿಸಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ, ವಿರಾಜಪೇಟೆಯ ತರ್ಮೆಕಾಡು ಪೈಸಾರಿಯಲ್ಲಿ ಕರಸೇವೆ ಹೆಸರಿನಲ್ಲಿ ದಾಳಿ ಮಾಡಿದ ಕೋಮುವಾದಿಗಳು ದಲಿತರು ಹಾಗೂ ಆದಿವಾಸಿಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ನಿವೇಶನ ನೀಡಿ ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ನಿಯಮಾನುಸಾರ ಭೂಮಿ ನೀಡದೆ ಅಲ್ಪ ಪ್ರಮಾಣವನ್ನು ನೀಡಿ ಕೈತೊಳೆದುಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಹಾಗೂ ಆದಿವಾಸಿಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆಯುತ್ತಿಲ್ಲವೆಂದು ನಿರ್ವಾಣಪ್ಪ ಟೀಕಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ರಾಜ್ಯವ್ಯಾಪಿ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿದರು.
::: ಬೇಡಿಕೆಗಳು :::
ವಿರಾಜಪೇಟೆ ತರ್ಮೆಕಾಡು ಪೈಸಾರಿಯ ದಲಿತ ಆದಿವಾಸಿ ಬಡವರನ್ನು ಒಕ್ಕಲೆಬ್ಬಿಸದೆ ಎಲ್ಲರಿಗೂ ಹಕ್ಕು ಪತ್ರ ನೀಡಬೇಕು, ಇತರರು ದೌರ್ಜನ್ಯ ನಡೆಸದಂತೆ ಪೊಲೀಸ್ ರಕ್ಷಣೆ ನೀಡಬೇಕು, ಗೋಣಿಗದ್ದೆ ಕೊಡಂಗೆ ಆದಿವಾಸಿಗಳಿಗೆ ರಸ್ತೆ ಅಂಚಿನಲ್ಲಿ ತಲಾ 3 ಎಕರೆ ಜಾಗ ನೀಡಿ ಪುನರ್‍ವಸತಿ ಕಲ್ಪಿಸಬೇಕು, ಉಚಿತ ವಿದ್ಯುತ್ ನೀಡಬೇಕು, 57, 94ಸಿ, 94ಸಿಸಿ ಯಡಿಯ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಿ ಬಡವರಿಗೆ ಹಕ್ಕು ಪತ್ರಗಳನ್ನು ನೀಡಬೇಕು, ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ಎಲ್ಲಾ ಆದಿವಾಸಿಗಳು ಕನಿಷ್ಟ 5 ಎಕರೆ ಭೂಮಿ ನೀಡಬೇಕು, ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ಎಲ್ಲಾ ಬಡವರಿಗೆ, ಕೃಷಿ ಕಾರ್ಮಿಕರಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಕರ್ನಾಟಕ ರೈತ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಹೆಚ್.ಇ.ಸಣ್ಣಪ್ಪ, ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾಧ್ಯಕ್ಷೆ ಪವಿತ್ರ, ಕಾರ್ಯದರ್ಶಿ ಎಸ್.ಆರ್.ಮಂಜುನಾಥ, ಭರತ್, ಮಧು, ಚಿಣ್ಣಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.