ಖಾಸಗೀಕರಣದ ವಿರುದ್ಧ ಮಡಿಕೇರಿಯಲ್ಲಿ ಎಲ್‍ಐಸಿ ನೌಕರರ ಪ್ರತಿಭಟನೆ

26/11/2020

ಮಡಿಕೇರಿ ನ.26 : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಖಾಸಗೀಕರಣ ನೀತಿಗಳನ್ನು ವಿರೋಧಿಸಿ, ವಿವಿಧ ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಬೆಂಬಲ ಸೂಚಿಸಿ ಜೀವವಿಮಾ ನಿಗಮದ ನೌಕರರ ಸಂಘದ ಮಡಿಕೇರಿ ಶಾಖಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಭಾರತೀಯ ಜೀವವಿಮಾ ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಿಬ್ಬಂದಿಗಳು ಸರ್ಕಾರ ಜಾರಿಗೆ ತಂದಿರುವ ಖಾಸಗೀಕರಣ ನೀತಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷರಾದ ಶಶಿಕಿರಣ, ಕೋವಿಡ್ ಲಾಕ್‍ಡೌನ್‍ನಿಂದಾಗಿ ಭಾರತದ ಆರ್ಥಿಕತೆಯು ಸಂಪೂರ್ಣವಾಗಿ ಕುಸಿದಿದ್ದು, ಜನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆರ್ಥಿಕತೆಯನ್ನು ಪುನಶ್ಚತನಗೊಳಿಸುವ ಜೊತೆಗೆ ಸಂಕಷ್ಟಕ್ಕೆ ಒಳಗಾಗಿರುವ ದುಡಿಯುವ ವರ್ಗದ ರಕ್ಷಣೆಗೆ ಬರಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಖಾಸಗೀಕರಣಕ್ಕೆ ಮುಂದಾಗಿರುವುದು ಖಂಡನೀಯವೆಂದರು.
ಭಾರತದ ಆರ್ಥಿಕ ಸ್ವಾವಲಂಬನೆಯನ್ನು ಎತ್ತಿ ಹಿಡಿದ ಎಲ್.ಐ.ಸಿ.ಯಂತಹ ಉನ್ನತ ಮಟ್ಟದ ಸಂಸ್ಥೆಯನ್ನು ಕೂಡ ವಿದೇಶಿ ಬಂಡವಾಳದ ಲಾಭಕ್ಕೆ ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ ಎಂದು ಟೀಕಿಸಿದರು.
::: ಬೇಡಿಕೆಗಳು :::
ಎಲ್‍ಐಸಿಯ ಐಪಿಓ ಪ್ರಸ್ತಾಪ ಹಿಂಪಡೆಯಬೇಕು, ಕಾರ್ಮಿಕ ವಿರೋಧಿ ನೀತಿಗಳು ರದ್ದಾಗಬೇಕು, ರೈತ ವಿರೋಧಿ ನಿಯಮಗಳನ್ನು ಕೈಬಿಡಬೇಕು, ಕಾರ್ಪೋರೇಟ್ ಅತಿಕ್ರಮಣ ಮತ್ತು ಕಾಂಟ್ರಾಕ್ಟ್ ಕೃಷಿ ವ್ಯವಸ್ಥೆ ರದ್ದಾಗಬೇಕು, ಆದಾಯ ತೆರಿಗೆ ಪಾವತಿಸದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ರೂ.7,500 ನೀಡಬೇಕು, ಅವಶ್ಯಕತೆ ಇರುವ ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ. ದವಸ ನೀಡಬೇಕು, ವಿಮಾ ನೌಕರರೂ ಒಳಗೊಂಡಂತೆ ಎಲ್ಲಾ ನೌಕರರಿಗೂ 1995ರ ಪಿಂಚಣಿ ಯೋಜನೆ ಅನ್ವಯವಾಗಬೇಕು, ಸರ್ಕಾರಿ ಹಾಗೂ ಸಾರ್ವಜನಿಕ ವಲಯದ ನೌಕರರನ್ನು ಅವಧಿಗೆ ಮುಂಚೆ ನಿವೃತ್ತಿ ಹೊಂದುವ ಸುತ್ತೋಲೆಯನ್ನು ಹಿಂಪಡೆಯಬೇಕು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಬೇಕು ಮತ್ತು ಈ ಯೋಜನೆಯನ್ನು ನಗರ ಪ್ರದೇಶದಲ್ಲಿ ಪ್ರಾರಂಭಿಸಬೇಕು, ಪರ್ಯಾಯ ಜನಪರ ಆರ್ಥಿಕ ನೀತಿಗಳು ಜಾರಿಯಾಗೇಕು, ವಿಮಾರಂಗದಲ್ಲಿ ವೇತನ ಪರಿಷ್ಕರಣೆ ಶೀಘ್ರವಾಗಿ ಆಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಪ್ರವೀಣ್, ಪ್ರಮುಖರಾದ ಯು.ಆರ್.ಅನಂತೇಶ್ ಸರಳಾಯ, ಹರ್ಷ ಶೆಟ್ಟಿ, ಹೆಚ್.ಎಂ.ಮಂಜಪ್ಪ, ಜಯಕುಮಾರ್, ಮುರುಳಿಧರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.