ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

26/11/2020

ಮಡಿಕೇರಿ ನ.26 : ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ(ಜೆಸಿಟಿಯು) ರಾಜ್ಯ ವ್ಯಾಪಿ ಕರೆ ನೀಡಿದ್ದ ಅಖಿಲ ಭಾರತ ಮುಷ್ಕರಕ್ಕೆ ಬೆಂಬಲವಾಗಿ ನಗರದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಂಘಟನೆಗಳ ಪ್ರಮುಖರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಜಂಟಿ ಕ್ರಿಯಾ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಬಿ.ರಮೇಶ್, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಯಾವುದೇ ಕಾನೂನುಗಳನ್ನು ಜಾರಿಗೊಳಿಸುವ ಮೊದಲು ಅದಕ್ಕೆ ಸಂಬಂಧಪಟ್ಟ ಸಮುದಾಯದವರೊಂದಿಗೆ ಚರ್ಚಿಸದೆ ಪ್ರಜಾಪ್ರಭುತ್ವ ನೀತಿಯನ್ನು ಗಾಳಿಗೆ ತೂರಿ ಸವಾರ್ಧಿಕಾರಿ ಪ್ರವೃತ್ತಿಯನ್ನು ಪಾಲಿಸುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಕೋವಿಡ್‍ನಿಂದ ಸಂಕಷ್ಟ ಎದುರಿಸುತ್ತಿರುವ ಕಾರ್ಮಿಕರು ದುಡಿಮೆಗೆ ಸರಿಯಾದ ಪ್ರತಿಫಲವಿಲ್ಲದೆ ಬೀದಿಗೆ ಬಂದಿದ್ದಾರೆ. ಇದರ ನಡುವೆಯೇ ಕಾರ್ಮಿಕರ ಕಷ್ಟವನ್ನು ಅರಿಯದ ಸರ್ಕಾರ ಬಂಡವಾಳ ಶಾಹಿಗಳಿಗೆ ಮಣೆ ಹಾಕುವ ಕಾರ್ಯದಲ್ಲಿ ತೊಡಗಿದೆ ಎಂದು ಟೀಕಿಸಿದರು.
ಕಾರ್ಮಿಕ ಪರ ಕಾನೂನನ್ನು ಉಳಿಸಬೇಕು, ಕಾರ್ಮಿಕರಿಗೆ ಲಾಕ್‍ಡೌನ್ ಕಾಲಾವಧಿಯ ಪೂರ್ಣ ವೇತನ ನೀಡಬೇಕು, ಕೊರೋನಾ ನಿಯಂತ್ರಣದ ಮುಂಚೂಣಿ ಸೇವಕರನ್ನು ಖಾಯಂಗೊಳಿಸಬೇಕು, ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ನಿಲ್ಲಿಸಬೇಕು, ಕೆಲಸದ ಭದ್ರತೆ ಒದಗಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಅಂಗನವಾಡಿ ಕಾರ್ಯಕರ್ತರಿಗೆ ಕನಿಷ್ಟ ವೇತನ ಮಂಜೂರು ಮಾಡಬೇಕು, ರೈತರಿಗೆ ಮಾರಕವಾದ ವಿದ್ಯುತ್ ತಿದ್ದುಪಡಿ ಮಸೂದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಎ.ಮಹದೇವ್, ಐಎನ್‍ಟಿಯುಸಿ ಜಿಲ್ಲಾ ಯೂತ್ ಸಂಘಟನಾ ಕಾರ್ಯದರ್ಶಿ ರವಿ, ಅಂಗವಾಡಿ ಮಹಾಮಂಡಳಿ ಸಂಘಟನೆಯ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕೆ.ಎಸ್.ಮುತ್ತಮ್ಮ, ಹಮಾಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಹಸನಬ್ಬ, ಕೊಡಗು ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್‍ನ ಜಿಲ್ಲಾ ಖಜಾಂಚಿ ಕೆ.ವಿನೋದ್, ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳ ಸಂಘದ ಜಿಲ್ಲಾಧ್ಯಕ್ಷೆ ಜಾನಕಿ, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಮುಖಂಡ ಅಶ್ರಫ್, ಎಐಟಿಯುಸಿ ಜಿಲ್ಲಾಧ್ಯಕ್ಷೆ ತೆಕ್ಕಡ ಪೂರ್ಣಿಮಾ ಸೇರಿದಂತೆ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.
ಕಾರ್ಮಿಕ ಸಂಘಟನೆಗಳ ಹೋರಾಟಕ್ಕೆ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಸಂಘಟನೆಗಳು ಎಲ್‍ಐಸಿ, ಬ್ಯಾಂಕ್, ರಕ್ಷಣಾ ವಲಯ, ರೈಲ್ವೆ, ಬಿಎಸ್‍ಎನ್‍ಎಲ್, ರಾಜ್ಯ ಮತ್ತು ಕೇಂದ್ರ ಸೇವೆ ಮುಂತಾದ ಅಖಿಲ ಭಾರತ ಸಂಘಟನೆಗಳು, ಕಾರ್ಮಿಕರು, ನೌಕರರು, ಅಸಂಘಟಿತ ಕ್ಷೇತ್ರದ ಕಾರ್ಮಿಕರಾದ ಕಟ್ಟಡ, ಹಮಾಲಿ, ಬೀಡಿ, ತೋಟಗಾರಿಕೆ ಗುತ್ತಿಗೆ ಕಾರ್ಮಿಕರು, ಪಂಚಾಯ್ತಿ ನೌಕರರು, ಬೀದಿ ಬದಿ ವ್ಯಾಪಾರಸ್ಥರು, ಆಟೋ ಟ್ಯಾಕ್ಸಿ, ಸಾರಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಅಂಗನವಾಡಿ, ಬಿಸಿಯೂಟ, ಆಶಾ, ನೌಕರರು ಮತ್ತು ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿದವು.