ಚೆಟ್ಟಳ್ಳಿ ಸಹಕಾರ ಸಂಘದ ವಾರ್ಷಿಕ ಮಹಾಸಭೆ : ಸಾಧಕರಿಗೆ ಸನ್ಮಾನ

26/11/2020

ಮಡಿಕೇರಿ ನ. 26 : ಜಿಲ್ಲೆಯಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ಚೆಟ್ಟಳ್ಳಿಯ ಶ್ರೀನರೇಂದ್ರ ಮೋದಿ ರೈತ ಸಹಕಾರ ಭವನ ಹೆಸರು ಅತ್ಯುನ್ನತಿಗೆ ತಲುಪಿದೆ. ಯಾವ ಸಾಲವಿಲ್ಲದೆ ರೈತ ತಾನು ಶ್ರಮವಹಿಸಿ ನೀಡಿದ ಹಣದಲ್ಲಿ ಭನವ ನಿರ್ಮಾಣವಾಗಿರುವುದು ಎಲ್ಲೂ ಕಾಣಲು ಸಾಧ್ಯವಿಲ್ಲ. ಈ ವರ್ಷ ಸಂಘವು 31 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಹರ್ಷ ವ್ಯಕ್ತಪಡಿಸಿದರು.
ಚೆಟ್ಟಳ್ಳಿಯ ಶ್ರೀನರೇಂದ್ರ ಮೋದಿ ರೈತ ಸಹಕಾರಭವನದಲ್ಲಿ ನಡೆದ ಚೆಟ್ಟಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 43ನೇ ಮಹಾಸಭೆಯಲ್ಲಿ ಪ್ರಾಸಾವಿಕ ನುಡಿಯನ್ನಾಡಿದರು.
ಸಹಕಾರ ಸಂಘವು ಕೃಷಿಸಾಲ, ಆಭರಣ ಈಡಿನ ಸಾಲ, ಆಸಾಮಿಸಾಲ, ಗೊಬ್ಬರಸಾಲ ಹೀಗೆ ಹಲವು ಸಾಲವನ್ನು ನೀಡುವುದರ ಜೊತೆಗೆ ಕಟ್ಟಡ ಬಾಡಿಗೆ ಹಲವು ಸೌವಲತ್ತನ್ನು ನೀಡುವ ಮೂಲಕ ಸಂಘವು ಲಾಭದ ಹಾದಿಯನ್ನು ಸಾಗುತ್ತಿರುವುದರಿಂದ ಈ ವರ್ಷ ಸದಸ್ಯರಿಗೆ ಶೇ.12 ಡಿವಿಡೆಂಟನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.
ಮುಂದಿನ ವರ್ಷ ಸಂಘವು ಇನ್ನೂ ಹೆಚ್ಚಿನ ಆದಾಯಗಳಿಸಿದರೆ ಶೇ.15ರ ಡಿವಿಡೆಂಟ್ ನೀಡುವ ಭರವಸೆ ನೀಡಿದರು.
ಸಂಘದಲ್ಲಿ ರೈತರಿಗೆ ಅನುಕೂಲವಾಗುವಂತೆ ಭದ್ರತಾಕೊಠಡಿ, 5ರೂಪಾಯಿಗೆ 20ಲೀಟರ್ ನೀರಿನ ಕುಡಿಯುವ ನೀರಿನ ಘಟಕ, ಕಾಫಿಗುಣಮಟ್ಟ ಪರೀಕ್ಷಿಸುವ ಕೇಂದ್ರ, ಸಂಘದ ಸಂಪೂರ್ಣ ಭದ್ರತೆಗೆ ಸಿಸಿಕ್ಯಾಮರಾ ಅಳವಡಿಕೆ, ಅಂಚೆ ಕಚೇರಿಗೆ ಬಾಡಿಗೆ ಕಟ್ಟಡ ನೀಡಲಾಗಿದೆ. ಮುಂದಿನದಿನಗಳಲ್ಲಿ ಸಂಘದಲ್ಲಿ ಮೈಕ್ರೋ ಎಟಿಎಂ ವ್ಯವಸ್ಥೆಯನ್ನು ಅಳವಡಿಸಲಾಗುವುದು, ಜೊತೆಗೆ ಸಂಘದ ಮೇಲಂತಸ್ತಿನಲ್ಲಿ ಪುಣ್ಯಕೋಟಿ ಅತಿಥಿಗ್ರಹ, ಸಭಾಂಗಣ ವ್ಯಾಪಾರಮಳಿಗೆಗಳ ನಿರ್ಮಾಣಕ್ಕೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಂದ 28ಲಕ್ಷ ಸಾಲದೊರೆತಿದ್ದು, ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಸಾಧಕರಿಗೆ ಸನ್ಮಾನ:
ಸಹಕಾರ ಸಂಘದ ಸದಸ್ಯರಾದ ಪತ್ರಕರ್ತ ಕರ್ನಾಟಕ ರಾಜ್ಯಪರ್ತಕರ್ತರ ಸಂಘ ನೀಡಿದ ವಾರ್ಷಿಕ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ ಪುತ್ತರಿರಕರುಣ್‍ಕಾಳಯ್ಯ, ಜಿಲ್ಲಾ ಏಲಕ್ಕಿ ಸಹಕಾರ ಸಂಘದ ನಿರ್ದೇಶಕ ಪೇರಿಯನ ಉದಯ್‍ಕುಮಾರ್ ಹಾಗೂ ನಿವೃತ್ತ ಯೋಧ ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿ ಪುತ್ತರಿರ ದೇವಯ್ಯ, ಸಂಘದ ಪರವಾಗಿ ಗೌರವಿಸಲಾಯಿತು. ಏಳನೆ, ಹತ್ತನೇ, ಬಿ. ಎ, ಬಿಕಾಂ, ಬಿಬಿಎಂ, ಬಿಎಸ್‍ಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ಮರದಾಳು ಉಲ್ಲಾಸ, ನಿರ್ದೇಶಕರುಗಳಾದ ಪುತ್ತರಿರ ಸೀತಮ್ಮ, ಕಣಜಾಲು ಪೂವಯ್ಯ, ಬಟ್ಟೀರ ಅಪ್ಪಣ್ಣ, ಪೇರಿಯನ ಪೂಣಚ್ಚ, ಧನಂಜಯ, ಟಿ.ಎಸ್. ಕಾಶಿ, ಬಿ.ಎಂ.ಕೊಂಗೇಟಿರವಾಣಿಕಾಳಪ್ಪ, ಬಿ.ಕೆ ಸೀತಮ್ಮ, ಪರಿಣತ ನೀರ್ದೇಶಕರಾದ ನೂಜಿಬೈಲು ಡಿ.ನಾಣಯ್ಯ, ಅಡಿಕೇರ ಈ. ಮುತ್ತಪ್ಪ, ಆರ್ಥಿಕ ಬ್ಯಾಂಕ್ ಪ್ರತಿನಿಧಿ ಅಜಿತ್, ವಿ.ಸಿ, ಆಂತರಿಕ ಲೆಕ್ಕ ಪರಿಶೋಧಕ ಹಾಗೂ ಸಲಹೆಗಾರರಾದ ಹೆಚ್.ಬಿ.ರಮೇಶ್ ಹಾಜರಿದ್ದರು.
ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ನಂದಿ ಪ್ರಾರ್ಥಿಸಿ, ವಂದಿಸಿದರು.