“ಕೊಡವ ನ್ಯಾಷನಲ್ ಡೇ” : ಕೊಡವ ಸಮುದಾಯ ಬುಡಕಟ್ಟು ಸ್ಥಾನಮಾನಕ್ಕೆ ಅರ್ಹವಾಗಿದೆ : ಎಂಎಲ್‍ಸಿ ವಿಶ್ವನಾಥ್ ಅಭಿಪ್ರಾಯ

26/11/2020

ಮಡಿಕೇರಿ ನ.26 : ಹೋರಾಟ ಮತ್ತು ನಾಯಕತ್ವ ಸುಲಭದ ಕೆಲಸವಲ್ಲ, ಎಲ್ಲವನ್ನು ಬದಿಗಿಟ್ಟು ಸಮುದಾಯದ ಹಕ್ಕುಗಳಿಗೆ ಹೋರಾಟ ಮಾಡುವವರನ್ನು ಎಲ್ಲರೂ ಮೆಚ್ಚಬೇಕು ಮತ್ತು ಬೆಂಬಲಿಸಬೇಕು ಎಂದು ಮಾಜಿ ಸಂಸದ, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕರೆ ನೀಡಿದ್ದಾರೆ.
ನಗರದ ಹೊರ ವಲಯದ ಕ್ಯಾಪಿಟಲ್ ವಿಲೇಜ್‍ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ 30ನೇ “ಕೊಡವ ನ್ಯಾಷನಲ್ ಡೇ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡವ ಕುಲಶಾಸ್ತ್ರ ಅಧ್ಯಯನ ಪೂರ್ಣಗೊಂಡ ಬಳಿಕ ಅಧ್ಯಯನ ವರದಿಯ ವಿಚಾರಗಳ ಬಗ್ಗೆ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರನ್ನು ಮಡಿಕೇರಿಗೆ ಕರೆಯಿಸಿ ಆ ಬಗ್ಗೆ ಮುಕ್ತ ಚರ್ಚೆ ನಡೆಸಬೇಕು ಎಂದು ಹೆಚ್. ವಿಶ್ವನಾಥ್ ಸಲಹೆ ನೀಡಿದರು.
ಕೊಡವರ ಶಿಸ್ತು ಮತ್ತು ಸಂಸ್ಕøತಿಯನ್ನೇ ಅವರ ಆರ್ಥಿಕ ಶ್ರೀಮಂತಿಕೆ ಎನ್ನಲಾಗದು. ಕೊಡವರ ಆಚಾರ ವಿಚಾರ, ಪದ್ದತಿ ಪರಂಪರೆ ಬೇರೆ ಯಾವುದೇ ಸಮುದಾಯದಲ್ಲೂ ಕಾಣ ಸಿಗುವುದಿಲ್ಲ ಎಂದು ಹೇಳಿದ ಹೆಚ್.ವಿಶ್ವನಾಥ್, ಕೊಡವ ಸಮುದಾಯ ಬುಡಕಟ್ಟು ಸ್ಥಾನಮಾನಕ್ಕೆ ಅರ್ಹವಾಗಿದೆ ಎಂದು ಪ್ರತಿಪಾದಿಸಿದರು.
ಕೊಡವ ಕುಲಶಾಸ್ತ್ರ ಅಧ್ಯಯನ ನಡೆಸುತ್ತಿರುವ ಸಂಸ್ಥೆಯ ನಿರ್ದೇಶಕರಿಗೆ ಸ್ವಾಮೀಜಿ ಒಬ್ಬರು ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಿದ ವಿಶ್ವನಾಥ್, ರಾಜಕೀಯದ ಅಧಿಕಾರ ಎಲ್ಲಾ ಸಮುದಾಯಕ್ಕೂ ಸಿಗಬೇಕು. ರಾಜಕೀಯ ಅಧಿಕಾರ ಸಿಕ್ಕಿದ ಕಾರಣದಿಂದಲೇ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಪ್ರಾಧಿಕಾರ ರಚನೆ ಮೂಲಕ 500 ಕೋಟಿ ರೂ. ನೀಡಲಾಗಿದೆ. ಇದೇ ಸ್ಥಾನಮಾನ ಕೊಡವ ಸಮುದಾಯಕ್ಕೂ ಸಿಗಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಕೊಡವ ಸಮುದಾಯದ ಜನಸಂಖ್ಯೆ 2 ಲಕ್ಷ ಸಮೀಪವಿದ್ದರೂ ಕೂಡ 10 ಸಾವಿರಕ್ಕೂ ಅಧಿಕ ಅಧಿಕಾರಿಗಳು ಸೈನಿಕರು ರಕ್ಷಣಾ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಇಂತಹ ಸಮುದಾಯ ಸಂವಿಧಾನದ ಎಲ್ಲಾ ಹಕ್ಕುಗಳನ್ನು ಪಡೆಯಬೇಕು ಎಂದು ಅಭಿಫ್ರಾಯಪಟ್ಟರು. ಹೋರಾಟವೇ ಒಂದು ಶಕ್ತಿಯಾಗಿದ್ದು ಅದನ್ನು ಮುಂದುವರೆಸಿಕೊಂಡು ಹೋದಲ್ಲಿ ಯಶಸ್ಸು ಸಿಗುತ್ತದೆ ಎಂದರು.
ಸಂವಿಧಾನ ಇಲ್ಲದೇ ಹೋಗಿದ್ದಲ್ಲಿ ತಮಗೆ ಸೇರಿದಂತೆ ಯಾರಿಗೂ ಪಾರ್ಲಿಮೆಂಟ್ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ ಹರಿಪ್ರಸಾದ್, ಕೊಡವರ ಸಂಸ್ಕøತಿ, ಭಾಷೆ, ಸಂಸ್ಕಾರ ಉಳಿಯಬೇಕಾದರೆ ಸಂವಿಧಾನ ಬದ್ದ ಹೋರಾಟ ನಡೆಯಬೇಕು. ತಮ್ಮ ಸಂಸ್ಕøತಿ, ಸಂಸ್ಕಾರ, ಭಾಷೆ ಉಳಿಸುವ ನಾಚಪ್ಪ ಅವರ ಹೋರಾಟಕ್ಕೆ ಎಲ್ಲರೂ ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಹರಿ ಪ್ರಸಾದ್ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಮಾತನಾಡಿ, ಕೊಡವರ ಹಕ್ಕುಗಳ ಕುರಿತು ಸದನದಲ್ಲೂ ಈ ಹಿಂದೆ ಧ್ವನಿ ಎತ್ತಿದ್ದೆ. ಮುಂದಿನ ತಿಂಗಳು ನಡೆಯುವ ಅಧಿವೇಶನದಲ್ಲೂ ಈ ಬಗ್ಗೆ ಧ್ವನಿ ಎತ್ತುತ್ತೇನೆ ಎಂದು ಭರವಸೆ ನೀಡಿದರು. ಈ ಬಾರಿ ಬಿಜೆಪಿಯ ಹೆಚ್. ವಿಶ್ವನಾಥ್, ಕಾಂಗ್ರೇಸ್‍ನ ಬಿ.ಕೆ. ಹರಿಪ್ರಸಾದ್ ಅವರು ಕೂಡ ಕೊಡವರ ಹಕ್ಕುಗಳ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಚರ್ಚಿಸಲು ಮತ್ತಷ್ಟು ಬಲ ಬಂದಂತಾಗಿದೆ ಎಂದು ಹೇಳಿದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಹಿರಿಯ ವಕೀಲ ಎಂ.ಟಿ.ನಾಣಯ್ಯ ಮಾತನಾಡಿ, ಹೋರಾಟದಲ್ಲಿ ಭಾಗವಹಿಸುವುದೇ ಪ್ರತಿಯೊಬ್ಬರು ನೀಡಬಹುದಾದ ದೊಡ್ಡ ಕೊಡುಗೆ ಎಂದು ಹೇಳಿದರು. ಕೊಡವರ ಹಕ್ಕುಗಳಿಗಾಗಿ ಕಳೆದ 30 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿರುವ ಹೋರಾಟಕ್ಕೆ ಎಲ್ಲಾ ಕೊಡವ ಸಂಘಟನೆಗಳು ಕೈ ಜೋಡಿಸಬೇಕು. ಆ ಮೂಲಕ ಅಂತಿಮವಾಗಿ ಸಂವಿಧಾನದ ಹಕ್ಕುಗಳನ್ನು ಸಂಘಟಿತರಾಗಿ ಪಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಸಂಚಾಲಕ ನಂದಿನೆರವಂಡ ನಾಚಪ್ಪ ಮಾತನಾಡಿ, ಕೊಡವ ಸಮುದಾಯದ ಆಚಾರ ವಿಚಾರ, ಪದ್ದತಿ ಪರಂಪರೆಗಳು, ಕೊಡವರ ಭೂಮಿ ಹಾಗೂ ಭಾಷೆಗೆ ಸಂವಿಧಾನದಿಂದ ಮಾತ್ರವೇ ಭದ್ರತೆ ಸಿಗಲು ಸಾಧ್ಯ ಎಂದು ಪ್ರತಿಪಾದಿಸಿದರು.
ಹೀಗಾಗಿಯೇ ಸಿಎನ್‍ಸಿ ಸಂಘಟನೆ ಕಳದೆ 30 ವರ್ಷಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದೆ. ಕೊಡವ ಮತ್ತು ಭಾರತೀಯ ಎರಡೂ ಪದಗಳು ಒಂದೇ ಎಂದು ಹೇಳಿದ ನಾಚಪ್ಪ, ಕೊಡವ ವಿರೋಧಿಗಳು ದೇಶ ವಿರೋಧಿಗಳಾಗುತ್ತಾರೆ ಎಂದು ಹೇಳಿದರು. ಕೊಡವ ಸಮುದಾಯ ವಿಶ್ವ ಶಾಂತಿಗೂ ಕೊಡುಗೆ ನೀಡಿದೆ ಎಂದು ಹೇಳಿದ ನಾಚಪ್ಪ, ಕೊಡವ ಸಮುದಾಯ ಬುಡಕಟ್ಟು ಸ್ಥಾನಮಾನಕ್ಕೆ ಅರ್ಹವಾಗಿದ್ದು, ರಾಜಕೀಯ ಸ್ವಾಯತ್ತತೆ, ಬಂದೂಕು ಹಕ್ಕು, ಭೂಮಿಗೆ ಭದ್ರತೆ ಸಂವಿಧಾನ ಬದ್ದವಾಗಿ ಸಿಗಲೇಬೇಕಿದೆ. ಇದಕ್ಕಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದ್ದು, ಮುಂದೆಯೂ ಹೋರಾಟ ನಡೆಯಲಿದೆ ಎಂದು ನಾಚಪ್ಪ ಹೇಳಿದರು.
ಇದೇ ಸಂದರ್ಭ ಸಿಎನ್‍ಸಿ ಸಂಚಾಲಕ ನಾಚಪ್ಪ ಅವರಿಗೆ ಸಂಘಟನೆ ವತಿಯಿಂದ ಬುಡಕಟ್ಟು ಸಮುದಾಯದ ಆಯುಧವಾದ ಬಿಲ್ಲುಬಾಣವನ್ನು ಗಣ್ಯರು ಬಿರುದಾಗಿ ನೀಡಿದರು.
ಬಳಿಕ ಕೊಡವ ನ್ಯಾಷನಲ್ ಡೇಯ ನಿರ್ಣಯಗಳಾದ ಕೊಡವರಿಗೆ ಬುಡಕಟ್ಟು ಸ್ಥಾನಮಾನ, ರಾಜಕೀಯ ಸ್ವಾಯತ್ತತೆ, ಕೊಡವರ ಭೂಮಿ, ಭಾಷೆ, ಬಂದೂಕು, ಸಂಸ್ಕøತಿ, ಪದ್ದತಿ ಪರಂಪರೆಗೆ ಸಂವಿಧಾನ ಭದ್ರತೆ ಕಲ್ಪಿಸುವ ನಿರ್ಣಯದ ಪ್ರತಿಯನ್ನು ನಾಚಪ್ಪ, ಗಣ್ಯರಿಗೆ ಹಸ್ತಾಂತರಿಸಿದರಲ್ಲದೇ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊಡವ ಕೊಡವತಿಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮಕ್ಕೂ ಮುನ್ನ ಎನ್.ಯು. ನಾಚಪ್ಪ ಗಾಳಿಯಲ್ಲಿ ಗುಂಡು ಹಾರಿಸುವ ಕೊಡವ ನ್ಯಾಷನಲ್ ಡೇಗೆ ಚಾಲನೆ ನೀಡಿದರು. ವ್ಯಾಲಿಡ್ಯೂ ಕಲಾ ತಂಡದಿಂದ ಕೋಲಾಟ್, ಕತ್ತಿಯಾಟ್, ಬೊಳಕಾಟ್ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಕಲಿಯಂಡ ಪ್ರಕಾಶ್, ವಿರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ವಾಂಚೀರ ನಾಣಯ್ಯ, ಮನೆಯಪಂಡ ಕಾಂತಿ ಸತೀಶ್, ಅಜ್ಜಿನಿಕಂಡ ಮಹೇಶ್ ನಾಚಯ್ಯ, ನಾಪಂಡ ರವಿ ಕಾಳಪ್ಪ, ಪುಲ್ಲೇರ ಸ್ವಾತಿ, ಮನು ಮುತ್ತಪ್ಪ ಸೇರಿದಂತೆ ಮತ್ತಿತ್ತರು ಹಾಜರಿದ್ದರು.