ರಸ್ತೆ ದುರಸ್ತಿ ಕಳಪೆಯಾದರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ : ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಒತ್ತಾಯ

ಮಡಿಕೇರಿ ನ.26 : ಮಡಿಕೇರಿ ನಗರದ ರಸ್ತೆಗಳು ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ದುರಸ್ತಿ ಪಡಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.
ವೇದಿಕೆಯ ಪ್ರಮುಖರು ಹಾಗೂ ಕಾರ್ಯಕರ್ತರು ನಗರಸಭಾ ಆಯುಕ್ತ ರಾಮ್ ದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಮಡಿಕೇರಿ ನಗರದ ಸಂಪಿಗೆ ಕಟ್ಟೆ ರಸ್ತೆಯಿಂದ ಕನ್ನಂಡ ಬಾಣೆ ರಸ್ತೆಯ ಮೂಲಕ ಹಾದು ಹೋಗುವ ರಸ್ತೆಯು ಗುಂಡಿಗಳಿಂದ ಕೂಡಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕಾಮಗಾರಿಯನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.
ಈಗಾಗಲೇ ನಗರದ ಕೆಲವು ರಸ್ತೆಗಳ ಕಾಮಗಾರಿಗಳು ನಡೆಯುತ್ತಿದ್ದು, ಅವುಗಳ ಗುಣಮಟ್ಟಗಳನ್ನು ಕಾಯ್ದುಕೊಂಡು ಕಳಪೆ ಕಾಮಗಾರಿ ನಡೆಯದಂತೆ ಎಚ್ಚರವಹಿಸಲು ತಾವುಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಕಾಮಗಾರಿ ಕಳಪೆಯಾದಲ್ಲಿ ಅಂತಹ ಗುತ್ತಿಗೆದಾರರನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು.
ಅಲ್ಲದೇ ನಗರದ ಗೌಳಿಬೀದಿಯಲ್ಲಿ ದಾನಿಗಳ ಸಹಕಾರದಿಂದ ನಗರಸಭೆಗೆ ನೀಡಿರುವ ಆಟದ ಮೈದಾನವನ್ನು ಶುಚಿಗೊಳಿಸಬೇಕು. ಮೈದಾನದಲ್ಲಿ ಅಕ್ಕಪಕ್ಕದ ಕಟ್ಟಡಗಳ ಕಾಮಗಾರಿಯ ಸಾಮಾಗ್ರಿಗಳನ್ನು ತಕ್ಷಣ ತೆರವುಗೊಳಿಸಿ ಮಕ್ಕಳಿಗೆ ಆಟವಾಡಲು ಮೈದಾನವನ್ನು ಮುಕ್ತಗೊಳಿಸಬೇಕು. ಇದೇ ಮೈದಾನದಲ್ಲಿ ಸಾರ್ವಜನಿಕರಿಗಾಗಿ ಶೌಚಾಲಯವಿದ್ದು, ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಇದನ್ನು ದುರಸ್ತಿ ಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡುವಂತೆ ಮನವಿ ಮಾಡಿದರು.
ಮನವಿ ನೀಡುವ ಸಂದರ್ಭ ವೇದಿಕೆಯ ಅಧ್ಯಕ್ಷ ರವಿಗೌಡ, ಪ್ರಮುಖರಾದ ಮಿನಾಜ್ ಪ್ರವೀಣ್, ಸತೀಶ್ ಪೈ, ವಸಂತ ಭಟ್, ವಿನೋದ್, ರಮೇಶ್ ಹಾಗೂ ಸದಸ್ಯರು ಹಾಜರಿದ್ದರು.