ಹೆಚ್.ವಿಶ್ವನಾಥ್ ಹೇಳಿಕೆಗೆ ಕೊಡಗು ಅನುದಾನ ರಹಿತ ಶಾಲೆಗಳ ಒಕ್ಕೂಟ ವಿರೋಧ

ಮಡಿಕೇರಿ ನ.26 : ಮಾಜಿ ಮಂತ್ರಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್ ಅವರು ಖಾಸಗಿ ಶಾಲೆಗಳ ಕುರಿತು ಮಡಿಕೇರಿಯಲ್ಲಿ ನೀಡಿರುವ ಹೇಳಿಕೆಯನ್ನು ಕೊಡಗು ಅನುದಾನ ರಹಿತ ಶಾಲೆಗಳ ಒಕ್ಕೂಟ ವಿರೋಧಿಸುತ್ತದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಖಾಸಗಿ ಶಾಲೆಗಳು ತಮ್ಮ ಖಜಾನೆ ತುಂಬಿಸುವ ಕೆಲಸವನ್ನು ಮಾಡುತ್ತಿಲ್ಲ. ಸರಕಾರ ಹಾಗೂ ರಾಜಕೀಯ ನಾಯಕರುಗಳು ನಗರ ಪ್ರದೇಶ ಮತ್ತು ಸಿಟಿ ಪ್ರದೇಶಗಳಲ್ಲಿರುವ ಕೆಲವೊಂದು ಕಾರ್ಪೋರೇಟ್ ಶಾಲೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದಾರೆ. ಇಂಥ ಹೇಳಿಕೆಗಳು ಅನುದಾನ ರಹಿತ ಶಾಲೆಗಳ ಮೇಲೆ ಗಾಯದ ಮೇಲೆ ಬರೆ ಎಳೆದಂತ್ತಾಗುತ್ತದೆ.
ಕೋವಿಡ್ ಸಂದರ್ಭದಲ್ಲಿ ಶಿಕ್ಷಕರಿಗೆ ಸಂಬಳ ನೀಡಲು ಕಷ್ಟವಾದರೂ ಮಕ್ಕಳ ಹಿತದೃಷ್ಟಿಯಿಂದ ಆನ್ಲೈನ್ ಕ್ಲಾಸ್ ನಡೆಸಲಾಗಿದೆ. ಶಾಲೆಗಳು ವಿದ್ಯಾರ್ಥಿಗಳು ಹಾಗೂ ಪೋಷಕರ ಸಂಪರ್ಕದಲ್ಲಿವೆ. ಸರ್ಕಾರ ವಿನಾಕಾರಣ ಪೋಷಕರು ಹಾಗೂ ಮಕ್ಕಳಲ್ಲಿ ಗೊಂದಲ ಸೃಷ್ಟಿಸುತ್ತಿದೆ. ದಿನಕ್ಕೊಂದು ಕಾನೂನು ಹಾಗೂ ಪತ್ರಿಕಾ ಹೇಳಿಕೆಯನ್ನು ಶಿಕ್ಷಣ ಸಚಿವರು ನೀಡುತ್ತಿದ್ದು, ಇದನ್ನು ಕೂಡ ಕೊಡಗು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟ ಖಂಡಿಸುತ್ತದೆ ಎಂದು ತಿಮ್ಮಯ್ಯ ತಿಳಿಸಿದ್ದಾರೆ.