ಕೊಡಗು : 6,167 ಕೋಟಿ ರೂ. ಆಧಾರಿತ ಸಾಲ ಯೋಜನೆ ಬಿಡುಗಡೆ

26/11/2020

ಮಡಿಕೇರಿ ನ.26 : ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್) ವತಿಯಿಂದ 2021-22 ನೇ ಸಾಲಿಗೆ 6,167 ಕೋಟಿ ರೂ. ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಗುರುವಾರ ಬಿಡುಗಡೆ ಮಾಡಿದರು.
‘ರೈತರ ಆದಾಯ ಹೆಚ್ಚಿಸುವಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಣೆ’ ಎಂಬ ಘೋಷವಾಕ್ಯದಡಿ ಗುರುವಾರ ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಾಮಥ್ರ್ಯ ಆಧಾರಿತ ಸಾಲ ಯೋಜನೆ ಬಿಡುಗಡೆ ಮಾಡಿದರು. ಜೊತೆಗೆ ಬ್ಯಾಂಕುಗಳ ಪ್ರಗತಿ ಬಗ್ಗೆ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರಕ್ಕೆ ಶೇ.69 ರಷ್ಟು(4287 ಕೋಟಿ ರೂ.), ಎಂ.ಎಸ್.ಎಂಇ ಶೇ.12 ರಷ್ಟು (801 ಕೋಟಿ ರೂ.), ವಿನಿಮಯ ಕ್ಷೇತ್ರಕ್ಕೆ ಶೇ.7 ರಷ್ಟು(435 ಕೋಟಿ ರೂ.), ಶಿಕ್ಷಣಕ್ಕೆ ಶೇ.2 ರಷ್ಟು (108 ಕೋಟಿ ರೂ.), ವಸತಿಗೆ ಶೇ.8 ರಷ್ಟು(512 ಕೋಟಿ ರೂ.), ಪರ್ಯಾಯ ಇಂಧನ ಬಳಕೆ (7 ಕೋಟಿ ರೂ.) ಹೀಗೆ ಮೂಲ ಸೌಕರ್ಯಕ್ಕೆ (16 ಕೋಟಿ ರೂ.) ಸಾಮಥ್ರ್ಯ ಆಧಾರಿತ ಸಾಲ ಯೋಜನೆ ಬಿಡುಗಡೆ ಮಾಡಿದರು.
2021-22 ನೇ ಸಾಲಿಗೆ ಆದ್ಯತಾ ಕ್ಷೇತ್ರಗಳಾದ ಕೃಷಿ, ಸಣ್ಣ ಉದ್ಯಮ, ಶಿಕ್ಷಣ, ವಸತಿ ಮತ್ತಿತರ ಮೂಲ ಸೌಲಭ್ಯ ಸೇರಿದಂತೆ ಹಲವು ಕ್ಷೇತ್ರಕ್ಕೆ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ನೀಡಲಾಗಿದ್ದು, ಇವುಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಹೇಳಿದರು.
ಸರ್ಕಾರ ಕೃಷಿ, ಪಶುಪಾಲನೆ, ಮೀನುಗಾರಿಕೆ, ತೋಟಗಾರಿಕೆ, ಸಣ್ಣ ಕೈಗಾರಿಕೆ ಮತ್ತು ಉದ್ಯಮಕ್ಕೆ ಹೆಚ್ಚಿನ ಅವಕಾಶವನ್ನು ನೀಡುತ್ತಿದ್ದು, ಆ ನಿಟ್ಟಿನಲ್ಲಿ ಪ್ರತಿಯೊಬ್ಬರ ಆರ್ಥಿಕ ಚಟುವಟಿಕೆ ಉತ್ತೇಜನ ನೀಡಲು ಶ್ರಮಿಸಬೇಕು ಎಂದು ಜಿ.ಪಂ.ಸಿಇಒ ಅವರು ಹೇಳಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕರಾದ ಪಿ.ವಿ.ಶ್ರೀನಿವಾಸ್ ಅವರು ಮಾತನಾಡಿ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂ. ವನ್ನು ಕೃಷಿ, ಮೂಲಭೂತ ಸೌಕರ್ಯಗಳಿಗೆ ಒದಗಿಸಿದೆ. ವಿಶೇಷವಾಗಿ ಸುಗ್ಗಿಯ ಕಟಾವಿನ ನಂತರ ನಿರ್ವಹಣೆಗೆ ಬಜೆಟ್ ನೀಡಲಾಗಿದೆ. ಇದನ್ನು ನಾಲ್ಕು ವರ್ಷಗಳಲ್ಲಿ ನಬಾರ್ಡ್ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಇದರಲ್ಲಿ ಶೇ.3 ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರ ಭರಿಸುತ್ತದೆ. 2 ಕೋಟಿ ರೂ.ವರೆಗೆ ಕೇಂದ್ರ ಸರ್ಕಾರ ಸಾಲವನ್ನು ನೀಡುತ್ತದೆ ಎಂದು ಅವರು ಮಾಹಿತಿ ನೀಡಿದರು.
ಕೃಷಿ ಮಾರುಕಟ್ಟೆ ಮೂಲಭೂತ ಸೌಕರ್ಯಗಳಿಗೆ ಗೋದಾಮು, ಶೀತಲೀಕರಣಗಳಿಗೆ ಶೇ.25ರಷ್ಟು ಸಹಾಯಧನವನ್ನು ನಬಾರ್ಡ್ ಮೂಲಕ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಸಹಕಾರ ಸಂಘಗಳ ಫ್ಯಾಕ್ಸ್‍ಗಳಿಗೆ ನಬಾರ್ಡ್‍ನ ಯೋಜನೆಯಡಿ ಶೇ.4 ರಷ್ಟು ಬಡ್ಡಿ ದರದಲ್ಲಿ ವಿವಿಧ ಬೆಳೆ ಕಟಾವಿನ ನಂತರ ನಿರ್ವಹಣೆಗೆ ಅಪೆಕ್ಸ್ ಹಾಗೂ ಡಿಸಿಸಿ ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರದಿಂದ ಹೈನುಗಾರಿಕೆ ಮತ್ತು ಮೀನುಗಾರಿಕೆ ಕೈಗೊಳ್ಳಲು ಡಿಸಿಸಿ ಬ್ಯಾಂಕ್ ಮೂಲಕ ನೀಡುವ ಸಾಲಕ್ಕೆ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ರಧಾನ ಮಂತ್ರಿ ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ ಹೆಚ್ಚಿನ ಸಾಲ ಸೌಲಭ್ಯ ದೊರೆಯಲಿದೆ. ಆತ್ಮ ನಿರ್ಭರ ಭಾರತ್ ಯೋಜನೆಗಳನ್ನು ಅನುಷ್ಠಾನಗೊಳಿಸುವುದು. ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಸಾಮಥ್ರ್ಯ ಆಧಾರಿತ ಸಾಲ ಯೋಜನೆಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಮೈಸೂರು ವಿಭಾಗದ ಯುನಿಯನ್ ಬ್ಯಾಂಕ್ ವಲಯ ಕಚೇರಿಯ ಉಪ ಮಹಾ ಪ್ರಬಂಧಕರಾದ ಸಿ.ವಿ.ಮಂಜುನಾಥ ಅವರು ಮಾತನಾಡಿ ಸರ್ಕಾರ ರೈತರಿಗೆ, ಕೃಷಿಕರಿಗೆ ಹಲವು ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ಶ್ರಮಿಸುತ್ತಿದೆ. ಕೋವಿಡ್-19 ಸಂದರ್ಭದಲ್ಲಿಯೂ ಸಹ ಕೃಷಿಕರು, ಬೀದಿ ಬದಿ ವ್ಯಾಪಾರಿಗಳು ಮತ್ತಿತರ ಸಂಕಷ್ಟವನ್ನು ನಿವಾರಿಸಲು ಶ್ರಮಿಸಿದೆ ಎಂದರು.
ಪ್ರಧಾನಮಂತ್ರಿ ನಿಧಿ ಯೋಜನೆಯಡಿ ಹಲವು ಕಾರ್ಯಕ್ರಮಗಳನ್ನು ತಲುಪಿಸಲಾಗುತ್ತದೆ. ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಸಂಬಂಧ ಬ್ಯಾಂಕ್‍ಗಳಿಗೆ ಬಂದಿದ್ದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಭಾರತೀಯ ರಿಸರ್ವ್ ಬ್ಯಾಂಕ್ ಪ್ರತೀ ನಿತ್ಯ ಪ್ರಗತಿ ಸಂಬಂಧಿಸಿದಂತೆ ವರದಿ ನೀಡಬೇಕು. ಆ ನಿಟ್ಟಿನಲ್ಲಿ ಆರ್ಥಿಕ ಗುರಿಯ ಪ್ರಗತಿ ಸಾಧಿಸಬೇಕು ಎಂದು ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸಲಹೆ ಮಾಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ ಅವರು ಬ್ಯಾಂಕ್‍ಗಳು ಗ್ರಾಹಕರ ಖಾತೆಗಳಲ್ಲಿ ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಬೇಕು. ಇದರಿಂದ ಸೌಲಭ್ಯಗಳನ್ನು ತ್ವರಿತವಾಗಿ ಪಡೆಯಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.