ಮಡಿಕೇರಿಯಲ್ಲಿ ಸಂವಿಧಾನ ದಿನಾಚರಣೆ : ಭಾರತದ ಸಂವಿಧಾನ ಸರ್ವ ಧರ್ಮಗಳ ಶ್ರೇಷ್ಠ ಗ್ರಂಥ : ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ

November 26, 2020

ಮಡಿಕೇರಿ ನ.26 : ಭಾರತದ ಪ್ರಜೆಗಳು ಎಲ್ಲರೂ ಒಂದು ಎಂಬ ಭಾವನೆಯಿಂದ ಜೀವಿಸಬೇಕು. ಸಮಾಜದಲ್ಲಿ ಜಾತಿ, ಧರ್ಮ ಎಂಬ ಬೇಧ ಭಾವವಿಲ್ಲದೇ ಬದುಕಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲಸಲು ಸಾಧ್ಯ. ಸಂವಿಧಾನವು ಸರ್ವ ಧರ್ಮಗಳ ಗ್ರಂಥವಿದ್ದಂತೆ ಎಂದು ಪ್ರಧಾನ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ ಅವರು ಹೇಳಿದರು.

ನಗರದ ರೋಟರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ವಕೀಲರ ಸಂಘ ಮತ್ತು ಮಡಿಕೇರಿ ರೋಟರಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1949ರ ನವೆಂಬರ್, 26 ರಂದು ಸಂವಿಧಾನವನ್ನು ಸಂವಿಧಾನ ಸಭೆಯಲ್ಲಿ ಅಂಗೀಕರಿಸಲಾಯಿತು. ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಪ್ರತಿಯನ್ನು ಸಭೆಯಲ್ಲಿ ಮಂಡಿಸಿದರು. ಅದರಂತೆ 1950 ಜನವರಿ, 26 ರಂದು ಸಂಪೂರ್ಣ ಜಾರಿಯಾಗಿ ಅಂದಿನಿಂದಲೇ ಗಣರಾಜ್ಯ ದಿನವಾಗಿ ಆಚರಿಸಿಕೊಂಡು ಬರಲಾಗಿದೆ ಎಂದು ಮಲ್ಲಿಕಾರ್ಜುನ ಗೌಡ ಅವರು ಹೇಳಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಹಲವಾರು ದೇಶಗಳ ಸಂವಿಧಾನ ಅಧ್ಯಯನ ಮಾಡಿ ರಾಷ್ಟ್ರಕ್ಕೆ ಉತ್ತಮ ಸಂವಿಧಾನ ನೀಡಿದರು. ಅಂಬೇಡ್ಕರ್ ಅವರ ದೂರದೃಷ್ಟಿ ಕಟ್ಟ ಕಡೆಯ ವ್ಯಕ್ತಿಗೂ ಕಾನೂನು ಮತ್ತು ಸಮಾನ ಅವಕಾಶಗಳು ತಲುಪುವಂತಾಗಬೇಕು ಎಂಬುದಾಗಿದೆ ಎಂದು ಅವರು ಹೇಳಿದರು.
ಪೊಲೀಸ್ ಉಪಾಧೀಕ್ಷರಾದ ದಿನೇಶ್ ಕುಮಾರ್ ಅವರು ಮಾತನಾಡಿ ಪ್ರತಿಯೊಬ್ಬ ಪ್ರಜೆಗಳಿಗೆ ಹಕ್ಕುಗಳ ಜೊತೆಗೆ ಕರ್ತವ್ಯದ ಬಗ್ಗೆ ಅರಿವು ಇರಬೇಕು. ಹಾಗೆಯೇ ದೇಶದ ಕಾನೂನುಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ನೂರುನ್ನೀಸ ಅವರು ಮಾತನಾಡಿ ದೇಶದ ಪ್ರತಿಯೊಬ್ಬ ಪ್ರಜೆಗೂ ಕಾನೂನಿನ ಪ್ರಜ್ಞೆ ಇರಬೇಕು ಕಾನೂನು ಇಲ್ಲದ ಸಮಾಜವನ್ನು ಉಹಿಸಿಕೊಳ್ಳಲು ಅಸಾಧ್ಯ. ಪ್ರತಿಯೊಬ್ಬರು ಸಂವಿಧಾನ ಪ್ರಸ್ತಾವನೆ ತಿಳಿದುಕೊಳ್ಳಬೇಕು. ದೇಶದ ಸಂವಿಧಾನ ರಕ್ಷಣೆ ಮಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದು ಹೇಳಿದರು.
ವಿವಿಧ ಅಪರಾಧ ಪ್ರಕರಣಗಳಲ್ಲಿ ನೊಂದಂತಹ ಸಂತ್ರಸ್ತರಿಗೆ ಸಂತ್ರಸ್ತ ಯೋಜನೆಯಡಿ ಇದೇ ಸಂದರ್ಭ ಚೆಕ್ ವಿತರಿಸಲಾಯಿತು. ಸಂತ್ರಸ್ತರು ಹಣವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಹಾಡಿಗಳಲ್ಲಿ ಪೊಕ್ಸೊ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಹಾಡಿ ಜನರಿಗೆ ಸಂವಿಧಾನ ಹಾಗೂ ಕಾನೂನು ಬಗ್ಗೆ ಅರಿವು ಮೂಡಿಸುವಂತೆ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ನೂರುನ್ನಿಸ ಅವರು ಸಲಹೆ ಮಾಡಿದರು.
ಎಫ್‍ಎಂಕೆಎಂಸಿ ಕಾಲೇಜಿನ ಉಪನ್ಯಾಸಕರಾದ ರಘು ಅವರು ಸಂವಿಧಾನದ ಮಹತ್ವ ಹಾಗೂ ಮೂಲಭೂತ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಪೆನಲ್ ವಕೀಲರು, ಅರೆಕಾಲಿಕ ಸ್ವಯಂ ಸೇವಕರು, ಒಡಿಪಿ ಮತ್ತು ಕ್ರೀಯಾಶೀಲ ಅಭಿವೃದ್ದಿ ಸಂಸ್ಥೆಯ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಕಾಲೇಜು ವಿದ್ಯಾರ್ಥಿಗಳು, ಇತತರು ಹಾಜರಿದ್ದರು.
ರೋಟರಿ ಅಧ್ಯಕ್ಷರಾದ ಪಿ.ಟಿ.ಗಣಪತಿ ಸ್ವಾಗತಿಸಿದರು, ಭಾರತಿ ಪ್ರಾರ್ಥಿಸಿದರು. ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ಅವರು ನಿರೂಪಿಸಿ, ವಂದಿಸಿದರು.

error: Content is protected !!