ಕಾನೂನು ಪದವೀಧರರಿಂದ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

November 27, 2020

ಮಡಿಕೇರಿ ನ.27 : ಪ್ರಸಕ್ತ(2020-21) ಸಾಲಿನಲ್ಲಿ ಕಾನೂನು ಪದವೀಧರರಿಗೆ ಪ್ರೋತ್ಸಾಹಧನ ನೀಡುವ ಯೋಜನೆಯ ಅರ್ಹ ಫಲಾನುಭವಿಗಳನ್ನು ಕೊಡಗು ಜಿಲ್ಲೆಯ ಜಿಲ್ಲಾ ಮಟ್ಟದ ಸಮಿತಿಯಿಂದ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರಿರುವ ನವ ಕಾನೂನು ಪದವೀಧರರು(ಫಲಾನುಭವಿಗಳು) ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು, ಮಡಿಕೇರಿ, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು-ಮಡಿಕೇರಿ, (ಕಾರ್ಯನಿರ್ವಹಣೆ ವಿರಾಜಪೇಟೆ ಮತ್ತು ಹಿರಿಯ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಸೋಮವಾರಪೇಟೆ ಈ ಹಿರಿಯ ನ್ಯಾಯಾಧೀಶರುಗಳ ಮುಖಾಂತರ ದಾಖಲೆ ಪ್ರತಿಗಳೊಂದಿಗೆ ಸ್ವಯಂ ದೃಢೀಕರಿಸಿ 2021 ರ ಜನವರಿ, 02 ರೊಳಗೆ ಸಲ್ಲಿಸಬೇಕು.
ಈ ಯೋಜನೆಯು 2020-21 ನೇ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ವಕೀಲರ ಷರತ್ತಿನಡಿಯಲ್ಲಿ 2019ರ ಜೂನ್, 01 ರಿಂದ 2020ರ ಮೇ, 31 ರವರೆಗಿನ ಅವಧಿಯಲ್ಲಿ ವಕೀಲ ವೃತ್ತಿಗೆ ನೊಂದಾಯಿಸಿದವರಿಗೆ ಮಾತ್ರ ಅನ್ವಯವಾಗುವುದು.
ಈ ಯೋಜನೆಯಡಿಯಲ್ಲಿ ಪ್ರೋತ್ಸಾಹಧನದ ಮೊತ್ತ ಪ್ರತಿ ಮಾಹೆಗೆ ರೂ.2 ಸಾವಿರ ಒಟ್ಟು 24 ತಿಂಗಳುಗಳ ಅವಧಿಗೆ ಸೀಮಿತವಾಗಿರುವುದು. ಸರ್ಕಾರಿ, ಅರೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ವಯೋನಿವೃತ್ತಿ ಕಡ್ಡಾಯ ನಿವೃತ್ತಿ ಮತ್ತು ಸ್ವ ಇಚ್ಚಾ ನಿವೃತ್ತಿ ಹೊಂದಿದ ನಂತರ ವಕೀಲ ವೃತ್ತಿ ನಡೆಸಲು ಇಚ್ಚಿಸುವ ಕಾನೂನು ಪದವೀಧರರು ಮತ್ತು ಅಂತಹ ಯಾವುದೇ ಸೇವೆಯಿಂದ ತೆಗೆದುಹಾಕಲ್ಪಟ್ಟ ಕಾನೂನು ಪದವೀಧರರು ಪ್ರೋತ್ಸಾಹಧನ ಪಡೆಯಲು, ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ವರಮಾನದ ಮಿತಿಯು ರೂ.40 ಸಾವಿರ ಮೀರತಕ್ಕದ್ದಲ್ಲ. ಇಂತಹ ಸೌಲಭ್ಯವನ್ನು ಈ ಯೋಜನೆ, ಇತರೆ ಯೋಜನೆಯಡಿ ಅಥವಾ ರಾಜ್ಯ ಸರ್ಕಾರದ ಬೇರೆ ಯಾವುದೇ ಇಲಾಖೆಯ ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳು ಈ ಯೋಜನೆಯ ಸೌಲಭ್ಯಗಳಿಗೆ ಅರ್ಹರಾಗಿರುವುದಿಲ್ಲ.
ಹೊಸದಾಗಿ ವಕೀಲರ ವೃತ್ತಿಯಲ್ಲಿ ತೊಡಗುವ ಕಾನೂನು ಪದವೀಧರರು ರಾಜ್ಯ ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿಸಿದ ನಂತರ ಸ್ಥಳೀಯ ವಕೀಲರ ಸಂಘದ ಅಧ್ಯಕ್ಷರಿಂದ ಪ್ರಮಾಣ ಪತ್ರ ಪಡೆದು ಸಂಬಂಧಪಟ್ಟ ಸಮಿತಿಯ ಸಂಬಂಧಿತ ತಾಲ್ಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶರುಗಳ ಮುಖಾಂತರ ಮತ್ತು ಜಿಲ್ಲಾ ಹಂತದಲ್ಲಿ ಅರ್ಹ ಕಾನೂನು ಪದವೀಧರರು ನೇರವಾಗಿ ಸಮಿತಿಯ ಅಧ್ಯಕ್ಷರ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರು ತಿಳಿಸಿದ್ದಾರೆ.

error: Content is protected !!