ಐಟಿ ಉದ್ಯಮದ ಪಿತಾಮಹ ಕೊಹ್ಲಿ ನಿಧನ

27/11/2020

ಬೆಂಗಳೂರು ನ.27 : ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್)ನ ಸ್ಥಾಪಕ ಮತ್ತು ಭಾರತದ ಐಟಿ ಉದ್ಯಮದ ಪಿತಾಮಹ ಎಂದೇ ಕರೆಯಲ್ಪಡುವ ಫಕೀರ್ ಚಂದ್ ಕೊಹ್ಲಿ ಅವರು ಗುರುವಾರ ನಿಧನರಾಗಿದ್ದಾರೆ.
ಟಿಸಿಎಸ್ ನ ಮೊದಲ ಸಿಇಒ ಆಗಿದ್ದ 96 ವರ್ಷದ ಎಫ್ ಸಿ ಕೊಹ್ಲಿ ಅವರು ಇಂದು ನಿಧನರಾಗಿದ್ದು, ನಾಸ್ಕಾಮ್ ಟ್ವೀಟ್ ಮೂಲಕ ಅವರಿಗೆ ಸಂತಾಪ ಸೂಚಿಸಿದೆ.
“ನಿಜವಾದ ದೂರದೃಷ್ಟಿ ಹೊಂದಿದ್ದ ಮತ್ತು ಭಾರತೀಯ ಸಾಫ್ಟ್‍ವೇರ್ ಉದ್ಯಮದ ಪಿತಾಮಹ – ಎಫ್‍ಸಿ ಕೊಹ್ಲಿ ಅವರು ಈ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಮತ್ತು ನಾಸ್ಕಾಮ್‍ನಲ್ಲಿ ಗಮನಾರ್ಹ ನಾಯಕತ್ವಕ್ಕಾಗಿ ಅವರನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುವುದು. ಅವರ ಕುಟುಂಬಕ್ಕೆ ನಮ್ಮ ಸಂತಾಪಗಳು” ಎಂದು ನಾಸ್ಕಾಮ್ ಟ್ವೀಟ್ ಮಾಡಿದೆ.
ಎಫ್‍ಸಿ ಕೊಹ್ಲಿ ಅವರು 1924ರ ಮಾರ್ಚ್ 19 ರಂದು ಬ್ರಿಟೀಷ್ ಆಡಳಿತದ ಪೇಶಾವರ್ ನಲ್ಲಿ ಜನಿಸಿದರು. ಪೇಶಾವರದಲ್ಲಿಯೇ ಶಾಲಾ ಶಿಕ್ಷಣವನ್ನು ಮಾಡಿದ ಅವರು, ಲಾಹೋರ್‍ನ ಪಂಜಾಬ್ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಬಿಎಸ್ಸಿ ಪದವಿ ಪಡೆದರು.