ಇತಿಹಾಸ ನಿರ್ಮಿಸಿದ ಜೋ ಬೈಡನ್

27/11/2020

ವಾಷಿಂಗ್ಟನ್ ನ.27 : ಅಮೆರಿಕದ ಚುನಾವಣೆಯ ಇತಿಹಾಸದಲ್ಲಿಯೇ 2020ರಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿದ್ದು, ಡೆಮೊಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಅವರು ಬರೋಬ್ಬರಿ 8 ಕೋಟಿ ಮತ ಪಡೆದಿದ್ದು, ಇತಿಹಾಸದಲ್ಲಿಯೇ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರು ಪಡೆದ ಅತಿ ಹೆಚ್ಚು ಮತಗಳಾಗಿದೆ.
ಬೈಡನ್ ಅವರಿಗಿಂತ ಡೊನಾಲ್ಡ್ ಟ್ರಂಪ್ ಸಾಕಷ್ಟು ಹಿಂದಿದ್ದಾರೆ. ಆದರೂ ಅವರು ಅತಿ ಹೆಚ್ಚು ಮತಗಳನ್ನು ಪಡೆದ ಅಧ್ಯಕ್ಷೀಯ ಅಭ್ಯರ್ಥಿಗಳಲ್ಲಿ ಎರಡನೆಯ ಸ್ಥಾನ ಪಡೆದಿದ್ದಾರೆ. ಸುಮಾರು 7.4 ಕೋಟಿ ಅಮೆರಿಕನ್ನರು ಅವರಿಗೆ ಮತ ಚಲಾಯಿಸಿದ್ದಾರೆ.
2008ರಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 69.5 ಮಿಲಿಯನ್ ಮತ ಸುಮಾರು( 6 ಕೋಟಿ 90 ಲಕ್ಷ) ಮತಗಳನ್ನು ಪಡೆದಿದ್ದು ಈವರೆಗಿನ ದಾಖಲೆಯಾಗಿತ್ತು. ಈಗ ಅವರದ್ದೇ ಪಕ್ಷದ ಬೈಡನ್ ಹೊಸ ದಾಖಲೆ ಬರೆದಿದ್ದಾರೆ.
2020ರ ಚುನಾವಣೆ ಅರ್ಹ ಮತದಾರರ ಪೈಕಿ ಶೇಕಡ 66ಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಿದ್ದಾರೆ ಎನ್ನಲಾಗಿದೆ.