ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವ ಧನ ಹೆಚ್ಚಳಕ್ಕೆ ಒತ್ತಾಯ

27/11/2020

ಮಡಿಕೇರಿ ನ.27 : ರಾಜ್ಯದ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವ ಧನವನ್ನು ದ್ವಿಗುಣಗೊಳಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಸಕಾರಾತ್ಮಕ ಸ್ಪಂದನೆ ದೊರಕದ ಹಿನ್ನೆಲೆ ಕೊಡಗು ಜಿಲ್ಲಾ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘ ಡಿ.2 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಸಂಘದ ಪದಾಧಿಕಾರಿ ಎಸ್.ಸಿ.ಶಿವರಾಜ್ ತಿಳಿಸಿದ್ದಾರೆ.
ಇಂದು ಇತರ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ನಂತರ ಪತ್ರಿಕಾ ಪ್ರಕಟಣೆ ನೀಡಿರುವ ಅವರು 2010-11 ರಲ್ಲಿ ರಾಜ್ಯದ ವಿಶೇಷ ಶಾಲೆಗಳಿಗೆ “ಶಿಶು ಕೇಂದ್ರೀಕೃತ ಸಹಾಯಧನ ಯೋಜನೆ” ಎಂಬ ಅನುದಾನ ನೀತಿಯನ್ನು ಜಾರಿಗೆ ತಂದು ವಿಶೇಷ ಶಾಲೆಗಳಲ್ಲಿರುವ ವಿಕಲಚೇತನ ಮಕ್ಕಳ ತಲೆ ಎಣಿಕೆ ಆಧಾರದ ಮೇಲೆ ಅನುದಾನ ಮಂಜೂರು ಮಾಡಲು ನಿರ್ಧರಿಸಲಾಗಿತ್ತು. ವಿಶೇಷ ಶಿಕ್ಷಕರಿಗೆ ರೂ.6,500 ಗೌರವಧನ ಮತ್ತು ಇತರ ಸಿಬ್ಬಂದಿಗಳಿಗೆ ರೂ.4 ರಿಂದ 5 ಸಾವಿರದವರೆಗೆ ಗೌರವಧನ ನೀಡಲಾಗುತ್ತಿತ್ತು.
ಆ ನಂತರ 2013-14ನೇ ರಾಜ್ಯ ಬಜೆಟ್‍ನಲ್ಲಿ ವಿಶೇಷ ಶಿಕ್ಷಕರ ಗೌರವಧನವನ್ನು 13,500ಕ್ಕೆ ಹಾಗೂ ಇತರ ಸಿಬ್ಬಂದಿಗಳಿಗೆ ರೂ.9000 ಗೌರವಧನವನ್ನು ಏರಿಕೆ ಮಾಡಲಾಗಿತ್ತು. ಆದರೆ 2014 ರಿಂದ ಇಲ್ಲಿಯವರೆಗೆ ವಿಶೇಷ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಗೌರವಧನವನ್ನು ಏರಿಕೆ ಮಾಡಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಶಿಶು ಕೇಂದ್ರೀಕೃತ ಸಹಾಯಧನ ಯೋಜನೆಯಡಿ ಸುಮಾರು 141 ವಿಶೇಷ ಶಾಲೆಗಳು ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಅನುದಾನವನ್ನು ಪಡೆಯುತ್ತಿದ್ದು, ಈ ಸಂಸ್ಥೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಕೇಂದ್ರ ಸರಕಾರ ನಿಗದಿ ಮಾಡಿರುವ ಕನಿಷ್ಠ ವೇತನ ಕೂಡ ದೊರೆಯುತ್ತಿಲ್ಲ. ಇದರಿಂದ ಜೀವನ ನಿರ್ವಹಣೆಯೇ ದುಸ್ತರವಾಗಿದೆ ಎಂದು ತಿಳಿಸಿದ್ದಾರೆ.
ಈಗಿನ ಸಚಿವೆ ಶಶಿಕಲಾಜೊಲ್ಲೆ ಅವರನ್ನು ಸಂಘದ ವತಿಯಿಂದ ಭೇಟಿ ಮಾಡಿ ಸಮಸ್ಯೆಗಳ ಕುರಿತು ಅನೇಕ ಬಾರಿ ಮನವರಿಕೆ ಮಾಡಕೊಡಲಾಗಿದೆ. ಆದರೆ ಸಭೆ ನಡೆಸುವ ಭರವಸೆಯನ್ನಷ್ಟೇ ನೀಡಿದ ಸಚಿವರು ಒಂದು ಬಾರಿಯೂ ಸಭೆ ನಡೆಸಿ ಚರ್ಚಿಸಿಲ್ಲವೆಂದು ಶಿವರಾಜ್ ಆರೋಪಿಸಿದ್ದಾರೆ.
ಅಲ್ಲದೇ 25 ವರ್ಷ ಮೀರಿದ ವಿಕಲಚೇತನ ವಯಸ್ಕರಿಗೆ ಸಂಬಂಧಿಸಿದ ಇಲಾಖೆಯಿಂದ ಯಾವುದೇ ತರಬೇತಿಯನ್ನಾಗಲಿ ಅಥವಾ ಪುನರ್ವಸತಿ ಕಾರ್ಯಕ್ರಮಗಳನ್ನಾಗಲಿ ಮಾಡಿಲ್ಲ. 2016ಕ್ಕೆ ಜಾರಿಗೆ ಬಂದಿರುವ ನೂತನ ಅಂಗವಿಕಲರ ಅಧಿನಿಯಮ ಕೇವಲ ಕಡತಕ್ಕೆ ಸೀಮಿತವಾಗಿರುವುದು ದುರಾದೃಷ್ಟಕರವೆಂದು ಟೀಕಿಸಿದ್ದಾರೆ.
ಆದ್ದರಿಂದ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ ಹಾಗೂ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ ನೀಡಿದ ಕರೆಯಂತೆ ಕೊಡಗು ಜಿಲ್ಲೆಯಲ್ಲೂ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಡಿ.2 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವಧನವನ್ನು ದ್ವಿಗುಣಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಡಳಿತಕ್ಕೆ ಮನವಿ ನೀಡುವ ಸಂದರ್ಭ ಸಂಘದ ಪದಾಧಿಕಾರಿಗಳಾದ ಗೀತಾ ಶ್ರೀಧರ್, ವೀಣಾ ನಾರಾಯಣ್, ಕೆ.ಯು.ಸಂಶಿದ, ಎಂ.ಬಿ.ಶಾಹಿನ, ಎಂ.ಜಿ.ನವೀನ್ ಮತ್ತಿತರರು ಹಾಜರಿದ್ದರು.