ಹುತ್ತರಿ ಅಂಗವಾಗಿ ಕುಶಾಲನಗರದಲ್ಲಿ ನ. 30 ರಂದು ಕದಿರು ವಿತರಣೆ

27/11/2020

ಕುಶಾಲನಗರ, ನ 27: ಹುತ್ತರಿ ಅಂಗವಾಗಿ ಕುಶಾಲನಗರದ ಗೌಡ ಸಮಾಜದ ಆಶ್ರಯದಲ್ಲಿ ನ.30 ರಂದು ಕದಿರು ತೆಗೆದು ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೌಡ ಸಮಾಜದ ಅಧ್ಯಕ್ಷ ಕೂರನ ಪ್ರಕಾಶ್ ತಿಳಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 30 ರಂದು ನಡೆಯುವ ಹುತ್ತರಿಯನ್ನು ಕೊರೊನ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಪದ್ಮಾವತಿ ಗೌಡ ಮಹಿಳಾ ಒಕ್ಕೂಟ, ಮಹಿಳಾ ಸ್ವಸಹಾಯ ಸಂಘ, ಮಾಜಿ ಸೈನಿಕರ ಗೌಡ ಕೂಟ, ಗೌಡ ಯುವಕ ಸಂಘ, ಯುವ ವೇದಿಕೆ, ಸಾಂಸ್ಕøತಿಕ ವೇದಿಕೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮುದಾಯ ಬಾಂಧವರು ಅಂದು ಕುಶಾಲನಗರದ ಗೌಡ ಸಮಾಜದಲ್ಲಿ ಸಂಜೆ 7 ಗಂಟೆಗೆ ಸೇರಿ ಲಘು ಉಪಹಾರ ನಂತರ 7.45 ಕ್ಕೆ ನೆರೆಕಟ್ಟಿ ಹಾರಂಗಿ ರಸ್ತೆಯ ಗೌಡ ಯುವಕ ಸಂಘದ ಆವರಣದಲ್ಲಿರುವ ಗದ್ದೆಗೆ ತೆರಳಿ 8.45ಕ್ಕೆ ಕದಿರು ತೆಗೆದು ಸ್ಥಲದಲ್ಲೇ ಸಾರ್ವಜನಿಕರಿಗೆ ವಿತರಣೆ ಮಾಡಲಾಗುವುದು. ಕೋವಿಡ್ ಹಿನ್ನಲೆಯಲ್ಲಿ ಯಾವುದೇ ರೀತಿಯ ಮೆರವಣಿಗೆ ಹಾಗೂ ಗೌಡ ಸಮಾಜದ ಸಭಾಂಗಣದಲ್ಲಿ ಕದಿರು ವಿತರಿಸುವ ಕಾರ್ಯಕ್ರಮ ಇರುವುದಿಲ್ಲ ಎಂದು ಅವರು ತಿಳಿಸಿದರು.
ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಮಾತನಾಡಿ, ಪ್ರತಿ ವರ್ಷದಂತೆ ಅದ್ದೂರಿ ಕಾರ್ಯಕ್ರಮ ನಡೆದುಕೊಂಡು ಬರುತ್ತಿತ್ತು. ಈ ಬಾರಿ ಪಟಾಕಿ, ಮೆರವಣಿಗೆ ರಹಿತವಾಗಿ ಹುತ್ತರಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಕುಶಾಲನಗರದಲ್ಲಿ ಗದ್ದೆಗಳ ಕೊರತೆ ಹಿನ್ನಲೆಯಲ್ಲಿ ಹುತ್ತರಿ ಆಚರಣೆಗೆಂದೇ ಗೌಡ ಯುವಕ ಸಂಘದ ಅಶ್ರಯದಲ್ಲಿ 4 ಗದ್ದೆಗಳಲ್ಲಿ ಯುವಕ ಸಂಘದ ಪ್ರಮುಖರು ಸ್ವತಃ ಕದಿರು ಬೆಳೆಸಿದ್ದು, ಈ ಗದ್ದೆಯಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಕದಿರು ತೆಗೆಯಲಾಗುತ್ತದೆ. ಕದಿರು ವಿತರಣೆ ಸಂದರ್ಭ ಸಮುದಾಯ ಬಾಂಧವರು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಗೌಡ ಸಮಾಜದ ನಿರ್ದೇಶಕ ಸುಳ್ಯಕೋಡಿ ಮಾದಪ್ಪ, ಯುವ ವೇದಿಕೆಯ ಅಧ್ಯಕ್ಷ ಕೂರನ ದರ್ಶನ್ ಇದ್ದರು.