ಎಸಿಬಿ ಬಲೆಗೆ ಬಿದ್ದಿದ್ದ ಪೊನ್ನಂಪೇಟೆ ನೌಕರ ಅಮಾನತು

27/11/2020

ಮಡಿಕೇರಿ ನ.27 : ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳದಿಂದ ಬಂಧಿತರಾದ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಕಚೇರಿ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಜಿ.ಪಂ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ನ.10ರಂದು ಪೊನ್ನಂಪೇಟೆ ಕಚೇರಿಯ ಪ್ರಥಮ ದರ್ಜೆ ಸಿಬ್ಬಂದಿ ಎಂ. ಅರುಣ್ ಭಾಸ್ಕರ್ ಎಂಬಾತನನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿತ್ತು. ಆರೋಪಿ ನೌಕರ ಈಗಾಗಲೇ 48 ಗಂಟೆಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವ ಹಿನ್ನಲೆ ಮತ್ತು ಅದೇ ಹುದ್ದೆಯಲ್ಲಿ ಮುಂದುವರಿದಲ್ಲಿ ಸಾಕ್ಷಿಗಳಿಗೆ ಬೆದರಿಸುವ ಅಥವಾ ದಾಖಲಾತಿಗಳನ್ನು ನಾಶಗೊಳಿಸುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಎಂ. ಅರುಣ್ ಭಾಸ್ಕರ್ ನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಕರ್ನಾಟಕ ನಾಗರಿಕ ಸೇವಾ ನಿಯಮ 1957ರಂತೆ ಅಮಾನತು ಆದೇಶ ಜಾರಿ ಮಾಡಲಾಗಿದ್ದು, ವಿಚಾರಣೆ ಮುಕ್ತಾಯ ಆಗುವವರೆಗೂ ಮೇಲಾಧಿಕಾರಿಗಳ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಟ್ಟು ತೆರಳದಂತೆಯೂ ಆದೇಶದ ಮೂಲಕ ಸೂಚನೆ ನೀಡಲಾಗಿದೆ.