ಕೊಳಚೆ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗೆ ಎಂಎಲ್ ಸಿ ಸುನೀಲ್ ಸುಬ್ರಮಣಿ ಚಾಲನೆ

27/11/2020

ಮಡಿಕೇರಿ ನ.27 : ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಗರದ ಮಂಗಳಾದೇವಿ ನಗರ ಮತ್ತು ಮಲ್ಲಿಕಾರ್ಜುನ ನಗರ ಕೊಳಚೆ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸುವ 18.04 ಲಕ್ಷ ವೆಚ್ಚದ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಶುಕ್ರವಾರ ಚಾಲನೆ ನೀಡಿದರು.
ನಗರದ ಮಂಗಳಾದೇವಿ ನಗರದಲ್ಲಿ 118 ಮೀ. ಉದ್ದದ ಚರಂಡಿ ಕಾಮಗಾರಿ ಹಾಗೂ ಮಲ್ಲಿಕಾರ್ಜುನ ನಗರದ 225 ಮೀ. ಉದ್ದದ ಸಿಮೆಂಟ್ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚರಂಡಿ ನಿರ್ಮಿಸುವಾಗ ನೀರು ಸುಗವಾಗಿ ಹರಿಯುವಂತೆ ಮಾಡಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಹೇಳಿದರು.
ರಸ್ತೆಯನ್ನು ಸುಸಜ್ಜಿತವಾಗಿ ನಿರ್ಮಿಸಬೇಕು ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಎಂಜಿನಿಯರ್‍ಗಳಿಗೆ ಸೂಚಿಸಿದ ಅವರು, ಸಾರ್ವಜನಿಕರು ತಮ್ಮ ಬಡಾವಣೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಕ್ಕೆ ತರಬೇಕು ಎಂದು ಹೇಳಿದರು.
ಪೌರಾಯುಕ್ತ ಎಸ್.ವಿ.ರಾಮದಾಸ್, ಪ್ರಮುಖರಾದ ಟಿ.ಎಸ್.ಪ್ರಕಾಶ್, ಉಮೇಶ್ ಸುಬ್ರಮಣಿ, ನೆರವಂಡ ಅನಿತಾ ಪೂವಯ್ಯ, ನವೀನ್ ಪೂಜಾರಿ, ಮಹೇಶ್ ಜೈನಿ, ಮನು ಮಂಜುನಾಥ್, ಅರುಣ್ ಕುಮಾರ್, ಸವಿತಾ ರಾಕೇಶ್, ಜೀವನ್, ಗೌರಮ್ಮ, ಶ್ವೇತಾ, ನಗರಸಭೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ತೇಜಶ್ರೀ, ಎಇ ಜವಾಹರ್ ಜೋಗಿ ಇತರರು ಇದ್ದರು.