ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ : ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಾಲಾಲ್ ಸೂಚನೆ

27/11/2020

ಮಡಿಕೇರಿ ನ.27 : ಜಿಲ್ಲೆಯ ಅಭಿವೃದ್ಧಿ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಹಲವು ಪ್ರಕರಣ ಇತ್ಯರ್ಥ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಾಲಾಲ್ ಅವರ ಉಪಸ್ಥಿತಿಯಲ್ಲಿ ಸಮನ್ವಯ ಸಭೆಯು ಗುರುವಾರ ನಗರದ ಅರಣ್ಯ ಭವನದಲ್ಲಿ ನಡೆಯಿತು.
ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಆಗಬೇಕಿರುವ ಕೆಲಸ ಕಾರ್ಯಗಳನ್ನು ಆದಷ್ಟು ಶೀಘ್ರ ಆದ್ಯತೆ ಮೇಲೆ ಪರಿಹರಿಸುವ ನಿಟ್ಟಿನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮುಂದಾಗುವಂತೆ ಡಿಎಫ್‍ಒಗಳಿಗೆ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಾಲಾಲ್ ಅವರು ತಿಳಿಸಿದರು.
ಪ್ರತಿ ತಿಂಗಳು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಂದಾಯ ಅಧಿಕಾರಿಗಳ ಸಭೆಗೆ ಡಿಎಫ್‍ಒ, ಎಸಿಎಫ್ ಅವರು ಹಾಜರಾಗುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಸೂಚಿಸಿದರು.
ಸಭೆಯ ಆರಂಭದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಲ್ದಾರೆ ಅರಣ್ಯ ಪ್ರದೇಶದಲ್ಲಿ 1978 ಕ್ಕೂ ಹಿಂದೆ ವಾಸಿಸುತ್ತಿದ್ದ ಇತರೆ ಜನಾಂಗದವರಿಗೆ ಹಕ್ಕುಪತ್ರ ನೀಡಲು ತುಂಬಾ ವರ್ಷದಿಂದ ಬಾಕಿಯಿದ್ದು, ಇದನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕಿದೆ ಎಂದು ಸಿಸಿಎಫ್ ಅವರ ಗಮನಕ್ಕೆ ತಂದರು.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಅವರು ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ಡಿಎಫ್‍ಒ ಅವರಿಗೆ ಸೂಚಿಸಿದರು.
ಭಾಗಮಂಡಲ-ತಣ್ಣಿಮಾನಿ, ಚೆಂಬು ಮತ್ತು ಕಟ್ಟಪಳ್ಳಿ ರಸ್ತೆ ನಿರ್ಮಾಣಕ್ಕೆ ಮಾನವಿಯತೆಯಿಂದ ಅನುಮತಿ ನೀಡಬೇಕು. ಸಾರ್ವಜನಿಕರಿಗೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸುವುದು ಅತ್ಯಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಕ್ರಮವಹಿಸುವಂತೆ ಡಿಎಫ್‍ಒ ಅವರಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು ಗಿರಿಜನ ಕಾಲೋನಿಗೆ ರಸ್ತೆ ನಿರ್ಮಾಣ ಸಂಬಂಧ ಗ್ರಾಮ ಸಭೆಯಲ್ಲಿ ತೀರ್ಮಾಸಿರುವ ನಡಾವಳಿಯನ್ನು ಒದಗಿಸುವಂತಾಗಬೇಕು ಎಂದು ಅವರು ಕೋರಿದರು.
ಮಾಂದಲ್ ಪಟ್ಟಿ ರಸ್ತೆ, ಬಾಳೆಲೆಯಲ್ಲಿ 66 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಜಾಗ ಒದಗಿಸುವಂಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದರು.
ಮಡಿಕೇರಿ ತಾಲ್ಲೂಕಿನ ಸಂಪಾಜೆ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ರಬ್ಬರ್ ತೋಟಕ್ಕೆ ಭೋಗ್ಯಕೆ ಭೂಮಿ ಹಾಗೂ ಜಿಲ್ಲೆಯ ಗಡಿಭಾಗ ಮಾಕುಟ್ಟ ವ್ಯಾಪ್ತಿಯಲ್ಲಿ ರಬ್ಬರ್ ತೋಟ ಮತ್ತಿತರ ಬಗ್ಗೆ ಇದೇ ಸಂದರ್ಭದಲ್ಲಿ ಚರ್ಚೆ ನಡೆಯಿತು.
ಐಟಿಡಿಪಿ ಅಧಿಕಾರಿ ಸಿ.ಶಿವಕುಮಾರ್ ಅವರು ಗಿರಿಜನರಿಗೆ ಆದ್ಯತೆ ಮೇಲೆ ಒದಗಿಸಬೇಕಿರುವ ಅಭಿವೃದ್ಧಿ ಕಾರ್ಯಗಳ ಸಂಬಂಧ ಪ್ರಸ್ತಾಪಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಿಲೇಶ್ ಶಿಂಧೆ, ಕಾರ್ಯಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ದಯಾನಂದ, ರೋಷನ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶೇಖರ್, ಶಿರಸ್ತೆದಾರ್ ಪ್ರಕಾಶ್, ಮಹೇಶ್, ವಲಯ ಅರಣ್ಯ ಅಧಿಕಾರಿಗಳು ಇತರರು ಹಲವು ಮಾಹಿತಿ ನೀಡಿದರು.