ದುಬಾರೆ ರಿವರ್ RAFTING : ಕೋವಿಡ್ ಮಾರ್ಗಸೂಚಿ ಅನುಸರಿಸಲು ಜಿಲ್ಲಾಧಿಕಾರಿ ಸೂಚನೆ

27/11/2020

ಮಡಿಕೇರಿ ನ.27 : ದುಬಾರೆಯಲ್ಲಿ ಕಳೆದ ಬಾರಿಯಂತೆ ರಿವರ್ RAFTING ಮುಂದುವರೆಸಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಒಂದು ಬೋಟ್‍ನಲ್ಲಿ 6 ಮಂದಿ ಮಾತ್ರ ತೆರಳಬೇಕು ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಬಾರಿಯಂತೆ ಈ ಬಾರಿಯು ಸಹ ರಿವರ್ ರ್ಯಾಪ್ಟಿಂಗ್ ಮುಂದುವರೆಸುವುದು. ಬೋಟ್ ಸುಸ್ಥಿತಿ ಸಂಬಂಧ ಪ್ರಮಾಣ ಪತ್ರ, ಪರವಾನಗಿ ಪತ್ರ ಹಾಗೂ ವಿಮಾ ಪ್ರಮಾಣ ಪತ್ರ ಪಡೆದಿರಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ದುಬಾರೆ ಇನ್ ಪ್ರತಿನಿಧಿ ರತೀಶ್ ಅವರು ಬೋಟ್ ಸುಸ್ಥಿತಿ ಸಂಬಂಧ ಪಿಟ್‍ನೆಸ್ ಪ್ರಮಾಣ ಪತ್ರ ಪಡೆಯಲಾಗಿದೆ. ಜೊತೆಗೆ ಅನುಮತಿ ಪತ್ರವನ್ನು ಸಹ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಈಶ್ವರ ಕುಮಾರ ಖಂಡು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಬಗ್ಗೆ ಹಲವು ಮಾಹಿತಿ ನೀಡಿದರು.

ಜಿ.ಪಂ.ಯೋಜನಾ ನಿರ್ದೇಶಕರಾದ ಶ್ರೀಕಂಠ ಮೂರ್ತಿ, ಡಿವೈಎಸ್‍ಪಿ ದಿನೇಶ್ ಕುಮಾರ್, ಅಗ್ನಿ ಶಾಮಕ ಇಲಾಖೆಯ ಅಧಿಕಾರಿ ಪಿ.ಚಂದನ್, ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಅಧಿಕಾರಿ ಚೇತನ್, ನಂಜರಾಯಪಟ್ಟಣ ಗ್ರಾ.ಪಂ. ಪಿಡಿಒ ಕಲ್ಪ, ರಿವರ್ ರ್ಯಾಪ್ಟಿಂಗ್ ಪ್ರತಿನಿಧಿಗಳಾದ ಕೃಷ್ಣಪ್ಪ, ವಿಶ್ವ ಇತರರು ಹಾಜರಿದ್ದರು.