ಮಡಿಕೇರಿಯಲ್ಲಿ ಚಾಲನೆಗೊಂಡ ಕಾಮಗಾರಿಗಳಿಗೆ ಮತ್ತೆ ಭೂಮಿ ಪೂಜೆ : ಜೆಡಿಎಸ್ ಆರೋಪ

November 27, 2020

ಮಡಿಕೇರಿ ನ.27 : ಮಡಿಕೇರಿ ನಗರಸಭೆ ಮೂಲಕ ನಗರೋತ್ಥಾನದ ಕಾಮಗಾರಿಗಳಿಗೆ 2018 ರಲ್ಲೇ ಯೋಜನೆ ರೂಪಿಸಿ ಚಾಲನೆ ನೀಡಲಾಗಿದೆ. ಆದರೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಬಿಜೆಪಿ ಪ್ರತಿನಿಧಿಗಳು ಮತ್ತೆ ಸರಣಿ ಭೂಮಿ ಪೂಜೆಯಲ್ಲಿ ತೊಡಗಿದ್ದಾರೆ ಎಂದು ಜಾತ್ಯತೀತ ಜನತಾದಳದ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾಶೇಷಮ್ಮ, ಎಸ್‍ಸಿ ಘಟಕದ ನಗರಾಧ್ಯಕ್ಷ ಹೆಚ್.ಎ.ರವಿ ಹಾಗೂ ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಎಂ.ಯು.ಕಲೀಲ್ ಬಾದ್ ಷಾ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆ, ಚರಂಡಿ, ತಡೆಗೋಡೆ ಮತ್ತು ಮೋರಿಗಳನ್ನು ನಿರ್ಮಿಸಲು ಈ ಹಿಂದಿನ ನಗರಸಭಾ ಸದಸ್ಯರುಗಳ ಬೇಡಿಕೆಯಂತೆ ನಗರೋತ್ಥಾನ ಅನುದಾನದಡಿ ಆಯಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 2018 ರಲ್ಲೇ ಸುಮಾರು 31 ಕೋಟಿ ರೂ.ಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಬಿಜೆಪಿ ಮಂದಿಯೊಂದಿಗೆ ನಗರದ ವಿವಿಧ ವಾರ್ಡ್‍ಗಳಲ್ಲಿ ಮತ್ತೆ ಭೂಮಿ ಪೂಜೆ ನೆರವೇರಿಸುವ ಮೂಲಕ ತಾವು ತಂದ ಅನುದಾನ ಎಂದು ಪ್ರತಿಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಕಂಡು ಬಂದಿದೆ ಎಂದು ಮೂವರು ಆರೋಪಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇರುವುದರಿಂದ ಶಾಸಕರುಗಳು ಸಾಧ್ಯವಾದರೆ ಮಡಿಕೇರಿ ನಗರದ ಸಮಗ್ರ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ವಿಶೇಷ ಅನುದಾನ ತರಲಿ ಎಂದು ಸವಾಲು ಹಾಕಿದ್ದಾರೆ.
ನಗರದಲ್ಲಿ ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಶಾಸಕರು ಹಾಗೂ ಪೌರಾಯುಕ್ತರು ಹೆಚ್ಚಿನ ನಿಗಾ ವಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

error: Content is protected !!